ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ ಕುರಿ, ನಾಟಿ ಕೋಳಿ ಬಹುಮಾನ!

ಚಾಮರಾಜನಗರ: ಕ್ರಿಕೆಟ್ ಟೂರ್ನ್‍ಮೆಂಟ್ ನಲ್ಲಿ ಗೆದ್ದಂತಹ ತಂಡಕ್ಕೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡೋದು ವಾಡಿಕೆ. ಆದ್ರೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಹನೂರಿನಲ್ಲಿ ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ ವಿಭಿನ್ನ ರೀತಿಯಲ್ಲಿ ಕುರಿ ಹಾಗೂ ನಾಟಿ ಕೋಳಿಗಳನ್ನು ಬಹುಮಾನವಾಗಿ ನೀಡಲಾಗಿದೆ.

ಹನೂರಿನ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಎಂಸಿಪಿಎಲ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಗೆದ್ದ ಮೊದಲ ತಂಡಕ್ಕೆ ಎರಡು ಕುರಿಗಳು ಹಾಗೂ ಎರಡನೇ ತಂಡಕ್ಕೆ ನಾಟಿಕೋಳಿಗಳನ್ನು ನೀಡಲಾಗಿದೆ. ಇದಲ್ಲದೇ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಆಟಗಾರನಿಗೆ ನಾಟಿಕೋಳಿ ಮೊಟ್ಟೆಗಳನ್ನು ನೀಡುವ ಮೂಲಕ ವಿಭಿನ್ನತೆ ಮೆರೆದಿದ್ದಾರೆ. ಬಾಲಕರು ಚಿಕ್ಕ ಚಿಕ್ಕ ಟೊಂಗೆಗಳನ್ನ ಹಿಡಿದುಕೊಂಡು ಚಿಯರ್ ಬಾಯ್ಸ್‍ನಂತೆ ಕುಣಿದಿದ್ದಾರೆ.

ಇತ್ತೀಚಿನ ಕ್ರಿಕೆಟ್ ಟೂರ್ನಿಗಳು ಕೇವಲ ಹಣ ಹಾಗೂ ಪಾರಿತೋಷಕಕ್ಕಾಗಿ ನಡೆಯುತ್ತವೆ. ಇದನ್ನು ಬದಲಿಸಿ ಗ್ರಾಮೀಣ ಪರಂಪರೆಯನ್ನು ಬೆಳಸುವ ಉದ್ದೇಶದಿಂದ ಈ ರೀತಿಯ ಒಂದು ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *