ಶತ್ರು ಮರ್ಧನಕ್ಕೆ ಶತ್ರು ಭೈರವಿ ಯಾಗ – ಏನಿದು ಯಾಗ? ಹೇಗೆ ಮಾಡಲಾಗುತ್ತದೆ?

ಸಾಂದರ್ಭಿಕ ಚಿತ್ರ

ಬೆಂಗಳೂರು: ಶತ್ರು ಭೈರವಿ ಯಾಗ (Shatru Bhairavi Yaga) ಮಾಡಿದ ದಿನದಿಂದ ಆರು ತಿಂಗಳು, ಒಂದು ವರ್ಷದ ಒಳಗಡೆ ಇದರ ಪರಿಣಾಮ ಬೀರುತ್ತದೆ ಎಂದು ಖ್ಯಾತ ಜ್ಯೋತಿಷಿ ಕಮಲಾಕರ ಭಟ್‌ ತಿಳಿಸಿದ್ದಾರೆ.

ನನ್ನ ಮತ್ತು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಕೇರಳದಲ್ಲಿ ಶತ್ರುಭೈರವಿ ಯಾಗ ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಬಾಂಬ್‌ ಸಿಡಿಸಿದ ಬೆನ್ನಲ್ಲೇ ಈ ಯಾಗ ಯಾಕೆ ಮಾಡುತ್ತಾರೆ? ಹೇಗೆ ಮಾಡುತ್ತಾರೆ ಎಂಬುದರ ಬಗ್ಗೆ ಪಬ್ಲಿಕ್‌ ಟಿವಿಗೆ ಕಮಲಾಕರ ಭಟ್‌ ಮಾಹಿತಿ ನೀಡಿದ್ದಾರೆ.

ಏನಿದು ಯಾಗ?
ಶತ್ರು ಮರ್ಧನ ಯಾಗ ಅಥವಾ ವಿಷ ಯಾಗ ಎಂದೇ ಕರೆಯುವ ಈ ಯಾಗವವನ್ನು ಶತ್ರುವನ್ನು ಮಣಿಸಲು ಮಾಡುತ್ತಾರೆ. ಈ ಯಾಗದಿಂದ ಶತ್ರುವಿನ ಮೇಲೆ ಎರಡು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಒಂದೋ ಶತ್ರುವಿನ ಬುದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಅಥವಾ ಶತ್ರು ಸಾವನ್ನಪ್ಪುತ್ತಾನೆ. ಕೆಲವೊಮ್ಮೆ ವೈದ್ಯಕೀಯ ವ್ಯವಸ್ಥೆಗೂ ಸಹ ವ್ಯಕ್ತಿಗೆ ಬಂದಿರುವ ರೋಗ ಯಾವುದು ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಈ ಯಾಗದಿಂದ ಇಂದಿಗೂ ಫಲ ಪಡೆಯಬಹುದು ಎನ್ನುವುದಕ್ಕೆ  ಹಲವು ನಿದರ್ಶನಗಳಿವೆ.  ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ; 33 ವರ್ಷಗಳ ಹಿಂದಿನ ಫೋಟೊ ವೈರಲ್‌

 

ಹೇಗೆ ಮಾಡಲಾಗುತ್ತದೆ?
ಅಘೋರಿಗಳನ್ನು ಕರೆಸಿ ಸ್ಮಶಾನದಲ್ಲಿ ಯಾಗ ನಡೆಯುತ್ತದೆ. ಸ್ಮಶಾನ ಕಾಳಿಯನ್ನು ಪ್ರಧಾನವಾಗಿಟ್ಟು ಅಷ್ಟ ಭೈರವಿಯನ್ನು ಕರೆದು ಯಾಗ ಮಾಡಿಸಲಾಗುತ್ತದೆ. ಮೊದಲು ಪ್ರಾಣಿಯ ಮೇಲೆ ನಡೆಯುತ್ತದೆ. ನೋಡುತ್ತಾ ನೋಡುತ್ತಾ ಪ್ರಾಣಿ ಸತ್ತು ಬೀಳುತ್ತದೆ. ಇದಕ್ಕೆ ಮಾಮೂಲಿ ತುಪ್ಪ, ಮರದ ಚಕ್ಕೆಗಳನ್ನು ಬಳಸುವುದಿಲ್ಲ. ಹಂದಿ, ಎಮ್ಮೆ ತುಪ್ಪ ಬಳಕೆ ಮಾಡಲಾಗುತ್ತದೆ. ವಿಷಯುಕ್ತ ಕಸರಕ ಮರ ಚಕ್ಕೆಗಳನ್ನು ಹೋಮಕ್ಕೆ ಹಾಕಿ ಹವನ ಮಾಡಲಾಗುತ್ತದೆ. ಮಣ್ಣಿನ ದೇವಿಗೆ ರಕ್ತ ನೀಡಿದಾಗ ರಕ್ತ ಹೀರುತ್ತದೆ.  ಈ ಯಾಗ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆಯುವುದಿಲ್ಲ. 9 ದಿನಗಳ ಕಾಲ ಪ್ರತಿ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 3 ಗಂಟೆಯವರೆಗೆ ಈ ಯಾಗ ನಡೆಯುತ್ತದೆ.

ಯಾರು ಮಾಡುತ್ತಾರೆ?
ಸಾಮಾನ್ಯ ಪುರೋಹಿತರು ಈ ಯಾಗ ಮಾಡುವುದಿಲ್ಲ. ಕಾಪಾಲಿಕರು, ಮಾಂತ್ರಿಕರು‌ ಮಾತ್ರವೇ ಈ ಯಾಗ ಮಾಡುತ್ತಾರೆ. ಈ ಯಾಗ ಮಾಡುವಾಗ ಸ್ವಲ್ಪ ವ್ಯತ್ಯಾಸವಾದ್ರೂ ಮಾಡಿಸುವ ಕರ್ತೃ, ಮಾಡಿಸುವ ಮಾಂತ್ರಿಕ ಇಬ್ಬರಿಗೂ ಹಾನಿ ಸಂಭವಿಸುವ ಸಾಧ್ಯತೆ. ಪಶ್ಚಿಮ ಬಂಗಾಳದಲ್ಲಿ ಮಾಡುವ ಕಾಶ್ಮೋರ ಪ್ರಯೋಗಕ್ಕೆ ಸರಿ ಸಮಾನವಾಗಿದೆ. ತಂತ್ರ ವಿದ್ಯೆ ಗೊತ್ತಿರುವ ಮಂದಿಗೆ ಮಾತ್ರ ಈ ಯಾಗ ಮಾಡಲು ಸಾಧ್ಯವಿದೆ. ಕೇರಳದ ಬೆರಳೆಣಿಕೆ ಮಂದಿ  ಯಾಗ ಮಾಡಲು ಅರ್ಹತೆ ಪಡೆದಿದ್ದಾರೆ.

 

ಪರಿಣಾಮ ಬೀರುತ್ತಾ?
ಶತ್ರು ಭೈರವಿ ಯಾಗ ಮಾಡಿದ ದಿನದಿಂದ ಆರು ತಿಂಗಳು, ಒಂದು ವರ್ಷದ ಒಳಗಡೆ ಇದರ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ. ದೈಹಿಕ, ಸಂಸಾರಿಕ, ಸಾಮಾಜಿಕವಾಗಿ ಪರಿಣಾಮ ಬೀರಬಹುದು. ವ್ಯಕ್ತಿಯ ಅಂಗಾಗಳನ್ನು ಬಲ ಹೀನರನ್ನಾಗಿ ಮಾಡಬಹುದು ಅಥವಾ ವ್ಯಕ್ತಿ ಸಾವನ್ನಪ್ಪಬಹುದು.

ಡಿಕೆಶಿ ಹೇಳಿದ್ದೇನು?
ಕೇರಳದ ರಾಜರಾಜೇಶ್ವರಿ ದೇವಸ್ಥಾನದ (Kerala’s Rajarajeshwari Temple ) ಆಸುಪಾಸಿನಲ್ಲಿ ಶತ್ರು ನಾಶಕ್ಕಾಗಿ ಶತ್ರು ಭೈರವಿ ಯಾಗ ನಡೆಯುತ್ತಿದೆ. ನಮ್ಮ ಸರ್ಕಾರವನ್ನು ನಾಶ ಮಾಡಬೇಕು ಅಂತ ಅಘೋರಿಗಳ ಮೊರೆ ಹೋಗಿದ್ದಾರೆ. ಅದಕ್ಕಾಗಿ ಹಂದಿ, ಕುರಿ ಸೇರಿ ಎಲ್ಲಾ ಬಲಿ ಕೊಡ್ತಿದ್ದಾರೆ. ಇದೆಲ್ಲವನ್ನ ಯಾರು ಮಾಡಿಸುತ್ತಿದ್ದಾರೆ ಅಂತ ನಮಗೆ ಗೊತ್ತಿದೆ. ಅವರ ನಂಬಿಕೆ ಅವರು ಮಾಡಲಿ. ಆದ್ರೆ ನಾವು ನಂಬಿರುವ ದೇವರು ನಮ್ಮನ್ನ ಕಾಪಾಡುತ್ತದೆ.

ಶತ್ರು ಸಂಹಾರ ಯಾಗ ಮಾಡಿಸುವುದಕ್ಕಾಗಿಯೇ 5 ಹಂದಿ, 3 ಎಮ್ಮೆ, 21 ಕಪ್ಪು ಬಣ್ಣದ ಕುರಿ, 21 ಮೇಕೆಗಳನ್ನ ಬಲಿ ಕೊಡ್ತಿದ್ದಾರೆ. ಈ ಶತ್ರು ಸಂಹಾರ ಯಾಗ ಯಾರು ಮಾಡ್ತಿದ್ದಾರೆ? ಯಾರು ಮಾಡಿಸುತ್ತಿದ್ದಾರೆ? ಎಲ್ಲವೂ ನನಗೆ ಗೊತ್ತಿದೆ. ಇದೆಲ್ಲವನ್ನು ರಾಜಕೀಯದಲ್ಲಿ ಇರುವವರೇ ಮಾಡುತ್ತಿದ್ದಾರೆ. ಈ ಬಗ್ಗೆ ಸದ್ಯಕ್ಕೆ ನಾನು ಏನೂ ಮಾತನಾಡುವುದಿಲ್ಲ ಎಂದು ಹೇಳಿದರು.