ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಗೆಲುವಿನ ಹತ್ತಿರ ತಂದ ವಾಟ್ಸನ್ ನೋವಿನ ಕಥೆ ಬಿಚ್ಚಿಟ್ಟ ಭಜ್ಜಿ!

ಬೆಂಗಳೂರು: ಮುಂಬೈ ವಿರುದ್ಧ ಐಪಿಎಲ್ ಫೈನಲ್ ಪಂದ್ಯದ ವೇಳೆ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದ ವಾಟ್ಸನ್ ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಬ್ಯಾಟ್ ಮಾಡಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇನ್‍ಸ್ಟಾ ಗ್ರಾಮ್ ನಲ್ಲಿ ವಾಟ್ಸನ್ ಬ್ಯಾಟ್ ಬೀಸುತ್ತಿರುವ ಫೋಟೋ ಹಾಕಿ, ವಾಟ್ಸನ್ ಅವರ ಮೊಣಕಾಲಿನಲ್ಲಿ ರಕ್ತ ಬರುತ್ತಿರುವುದನ್ನು ನೀವು ಗಮನಿಸಿದ್ದೀರಾ? ಆಟ ಮುಗಿದ ಬಳಿಕ 6 ಸ್ಟಿಚ್ ಗಳನ್ನು ಹಾಕಲಾಗಿದೆ. ಡೈವ್ ಮಾಡುವಾಗ ಕಾಲಿಗೆ ಪೆಟ್ಟಾಗಿದ್ದು, ಈ ವಿಚಾರವನ್ನು ಯಾರಿಗೂ ಹೇಳದೇ ಆಟವಾಡಿ ಪಂದ್ಯವನ್ನು ಗೆಲುವಿನ ಸಮೀಪ ತಂದಿದ್ದರು. ಇದು ನಮ್ಮ ಶೇನ್ ವಾಟ್ಸನ್ ಎಂದು ಬರೆದು ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಭಜ್ಜಿ 5 ಸ್ಟಾರ್ ನೀಡಿ ವಾಟ್ಸನ್ ಆಟವನ್ನು ಹೊಗಳಿದ್ದಾರೆ.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಗೊಂಡಾಗ ಯಾರಿಂದಲೂ ಸ್ಪಷ್ಟನೆ ಸಿಗದ ಕಾರಣ ಇದು ನಕಲಿ ಫೋಟೋ, ಫೋಟೋ ಶಾಪ್ ಮಾಡಲಾಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗ ಹರ್ಭಜನ್ ಅವರೇ ಸ್ಪಷ್ಟನೆ ನೀಡಿದ ಬಳಿಕ ಎದ್ದಿದ್ದ ಎಲ್ಲ ಅಂತೆ ಕಂತೆಗಳ ಸುದ್ದಿಗೆ ತೆರೆ ಬಿದ್ದಿದೆ.

150 ರನ್ ಗಳ ಸವಾಲು ಪಡೆದ ಚೆನ್ನೈ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದ ವಾಟ್ಸನ್ ತಂಡದ ಮೊತ್ತ  146 ರನ್ ಆಗಿದ್ದಾಗ ಪಂದ್ಯದ ಕೊನೆ ಓವರಿನ 4ನೇ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿ ರನೌಟ್ ಆಗಿದ್ದರು.

ಮಾಲಿಂಗ ಎಸೆದ 16ನೇ ಓವರ್ ವಾಟ್ಸನ್ ಹ್ಯಾಟ್ರಿಕ್ ಫೋರ್ ಹೊಡೆದಿದ್ದರೆ, ನಂತರ ಕೃನಾಲ್ ಪಾಂಡ್ಯ ಎಸೆದ ಓವರಿನಲ್ಲಿ ವಾಟ್ಸನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದರು. ಅಂತಿಮವಾಗಿ 80 ರನ್(59 ಎಸೆತ, 8 ಬೌಂಡರಿ, 4 ಸಿಕ್ಸರ್) ಸಿಡಿಸಿ ವಾಟ್ಸನ್ ಔಟ್ ಆದರು.

ವಾಟ್ಸನ್ ಕ್ರೀಸಿನಲ್ಲಿ ಇರುವವರೆಗೂ ಚೆನ್ನೈ ತಂಡ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಕೊನೆಯ ಓವರಿನಲ್ಲಿ 9 ರನ್ ಗಳಿಸುವ ಒತ್ತಡದಲ್ಲಿದ್ದಾಗ ವಾಟ್ಸನ್ ಕಾಲು ನೋವಿನ ನಡುವೆಯೂ 2 ರನ್ ಕದಿಯಲು ಮುಂದಾದಾಗ ರನೌಟ್ ಆಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.

Comments

Leave a Reply

Your email address will not be published. Required fields are marked *