ತ್ರಿವರ್ಣ ಧ್ವಜ ಸರಿ ಹಿಡಿಯುವಂತೆ ಅಭಿಮಾನಿಗೆ ಹೇಳಿದ್ದು ಯಾಕೆ? ಅಫ್ರಿದಿ ಹೇಳ್ತಾರೆ ಓದಿ

ಕರಾಚಿ: ಬೇರೆ ದೇಶಗಳ ಧ್ವಜವನ್ನು ಗೌರವಿಸುವುದು ನಮ್ಮ ಕರ್ತವ್ಯ. ಹಾಗಾಗಿ ನಾನು ಮಹಿಳಾ ಅಭಿಮಾನಿಯ ಕೈಯಲ್ಲಿದ್ದ ತ್ರಿವರ್ಣ ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳಲು ಹೇಳಿದೆ ಎಂದು ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡೆಯುತ್ತಿರುವ ರಾಜಕೀಯ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿದ ಅಫ್ರಿದಿ, ಈ ವಿಷಯವು ಕ್ರಿಕೆಟ್ ಪಂದ್ಯಗಳ ಮೇಲೆ ಪರಿಣಾಮ ಬೀರಿದೆ. ಆದರೆ ಎರಡೂ ದೇಶದ ಸ್ನೇಹದ ಸಂಬಂಧಕ್ಕೆ ಯಾವುದೇ ಅಡ್ಡಿ ಮಾಡಿಲ್ಲ. ರಾಷ್ಟ್ರಗಳ ನಡುವಿನ ಸಂಬಂಧಗಳ ಸುಧಾರಣೆಗಾಗಿ ಎರಡೂ ದೇಶದ ಆಟಗಾರರು ಕ್ರಿಕೆಟ್ ಆಡಲು ಪ್ರಯತ್ನಿಸುತ್ತಿದ್ದಾರೆ. ಶಾಂತಿಯ ರಾಯಭಾರಿಯಾದ ನಾವು ಸ್ನೇಹ, ಪ್ರೀತಿ ಮತ್ತು ಶಾಂತಿಯನ್ನು ಇಡೀ ಜಗತ್ತಿಗೆ ಸಾರಬೇಕು ಎಂದು ತಿಳಿಸಿದರು.

ಫೆ.8 ರಂದು ಸೇಂಟ್ ಮೊರಿಟ್ಜ್ ನಗರದ ಸ್ಕಿ ರಿಸಾರ್ಟ್ ನಲ್ಲಿ ನಡೆದ ಐಸ್ ಕ್ರಿಕೆಟ್ ಟೂರ್ನಿಯಲ್ಲಿ ವಿರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಮೈಕ್ ಹಸ್ಸಿ, ಪಾಕಿಸ್ತಾನದ ಶೊಯೆಬ್ ಅಖ್ತರ್ ಹಾಗೂ ಶ್ರೀಲಂಕಾದ ಮಹೇಲಾ ಜಯವರ್ಧನೆ ಸೇರಿದಂತೆ ಹಲವು ಕ್ರಿಕೆಟಿಗರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

ಸೆಹ್ವಾಗ್ ನೇತೃತ್ವದ ಪ್ಯಾಲೇಸ್ ಡೈಮಂಡ್ಸ್ ತಂಡವನ್ನು ಶಾಹಿದ್ ಅಫ್ರಿದಿ ನೇತೃತ್ವದ ರಾಯಲ್ಸ್ ತಂಡ ಸೋಲಿಸಿತ್ತು. ಪಂದ್ಯದ ಬಳಿಕ ಅಫ್ರಿದಿ ಅಭಿಮಾನಿಗಳ ಬಳಿ ಧಾವಿಸಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡಿದ್ದ ಭಾರತದ ಮಹಿಳಾ ಅಭಿಮಾನಿಯೊಬ್ಬರು ಅಫ್ರಿದಿ ಜೊತೆ ಫೋಟೋ ತೆಗೆಯಲು ಮುಂದಾಗಿದ್ದರು.

ಮಹಿಳಾ ಅಭಿಮಾನಿ ಸರಿಯಾಗಿ ಧ್ವಜ ಹಿಡಿದುಕೊಳ್ಳದೇ ಇರುವುದನ್ನು ಗಮನಿಸಿದ ಅಫ್ರಿದಿ, ಧ್ವಜವನ್ನು ಬಿಡಿಸಿ ಎಂದು ಹೇಳಿದರು. ಕೂಡಲೇ ಮಹಿಳಾ ಅಭಿಮಾನಿ ಧ್ವಜವನ್ನು ಬಿಡಿಸಿ ಅಫ್ರಿದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಭಾರತದ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಮೂಲಕ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮೆಚ್ಚುಗೆಗೆ ಪಾತ್ರರಾಗಿದ್ದರು.

https://twitter.com/Nibrazcricket/status/962004645806718977?

Comments

Leave a Reply

Your email address will not be published. Required fields are marked *