ಕೋವಿಡ್-19 ವಿರುದ್ಧ ಹೋರಾಟಕ್ಕೆ ಕಿಂಗ್‍ಖಾನ್ ಸಾಥ್ – ಸಾಲು ಸಾಲು ನೆರವು ಘೋಷಿಸಿ ಟೀಕೆಗಳಿಗೆ ಬ್ರೇಕ್

ಮುಂಬೈ: ಭಾರತದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದೆ. ಅಷ್ಟೇ ಅಲ್ಲದೇ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದೆ. ಲಾಕ್‍ಡೌನ್ ಹಿನ್ನೆಲೆ ದೇಶದ ಆರ್ಥಿಕತೆ ಕುಸಿದಿದ್ದು, ಎಲ್ಲರೂ ಕೊರೊನಾ ಹೋರಾಟಕ್ಕೆ ಸರ್ಕಾರದ ಜೊತೆ ಕೈ ಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿಕೊಂಡಿದ್ದರು. ಹೀಗಾಗಿ ಅನೇಕ ಕ್ರೀಡಾಪಟುಗಳು, ಸಿನಿಮಾ ತಾರೆಯರು ಸರ್ಕಾರಕ್ಕೆ ದೇಣಿಗೆ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದರು. ಆದರೆ ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ನೆರವಿಗೆ ಮುಂದೆ ಬಂದಿಲ್ಲ ಎಂಬ ಟೀಕೆಗಳು ಕೇಳಿಬಂದಿತ್ತು.

ಈಗ ಈ ಟೀಕೆಗಳಿಗೆ ಶಾರೂಖ್ ಬ್ರೇಕ್ ಹಾಕಿದ್ದು, ಸಾಲು ಸಾಲು ನೆರವುಗಳನ್ನು ಘೋಷಿಸುವ ಮೂಲಕ ಟೀಕೆಗಾರರ ಬಾಯಿ ಮುಚ್ಚಿಸಿದ್ದಾರೆ. ತಮ್ಮ ವಿವಿಧ ಫೌಂಡೇಷನ್‍ಗಳು, ಫ್ರಾಂಚೈಸಿಗಳ ಮೂಲಕ ದೇಶಕ್ಕೆ ಸಹಾಯ ಮಾಡುವುದಾಗಿ ಕಿಂಗ್‍ಖಾನ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ಹಾಗೂ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗಳಿಗೂ ದೇಣಿಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರದ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವುದರ ಜೊತೆಗೆ ಮುಂಬೈ ನಗರದಲ್ಲಿನ ಬಡವರಿಗೆ ಸಹಾಯ ಮಾಡುವುದಾಗಿ ಕಿಂಗ್‍ಖಾನ್ ತಿಳಿಸಿದ್ದಾರೆ. ಶಾರೂಖ್ ಅವರ ಈ ನೆರವಿಗಾಗಿ ಮಹಾರಾಷ್ಟ್ರ ಸಿಎಂ, ಶಾರೂಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಧನ್ಯವಾದ ತಿಳಿಸಿದ್ದರು.

ಪ್ರಧಾನ ಮಂತ್ರಿ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶಾರೂಖ್ ದೇಣಿಗೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ. ಕೆಕೆಆರ್ ಮತ್ತು ಮೀರ್ ಫೌಂಡೇಷನ್ ವತಿಯಿಂದ 50,000 ಆರೋಗ್ಯ ಕಿಟ್, ರೋಟಿ ಫೌಂಡೇಷನ್, ಮೀರ್ ಫೌಂಡೇಷನ್ ಕಡೆಯಿಂದ 3 ಲಕ್ಷ ಊಟದ ಕಿಟ್ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಅರ್ಥ್ ಫೌಂಡೇಷನ್, ಮೀರ್ ಫೌಂಡೇಷನ್ ಮೂಲಕ ಮುಂಬೈ ಒಂದರಲ್ಲಿಯೇ 5,500 ಮಂದಿಗೆ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಪ್ರತಿದಿನ 2000 ಜನರಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ಕಿಂಗ್‍ಖಾನ್ ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಪ್ರಧಾನಿ ನೀಡಿದ ಕರೆಗೆ ನಟ ಅಕ್ಷಯ್ ಕುಮಾರ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಚಿನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಕುಸ್ತಿಪಟು ಭಜರಂಗ್ ಪೂನಿಯಾ ಸೇರಿದಂತೆ ಅನೇಕರು ಭಾರೀ ಮೊತ್ತ ದೇಣಿಗೆ ನೀಡುವ ಮೂಲಕ ಕೈಜೋಡಿಸಿದ್ದಾರೆ. ಇತ್ತ ಸಲ್ಮಾನ್ ಖಾನ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ 25 ಸಾವಿರ ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

Comments

Leave a Reply

Your email address will not be published. Required fields are marked *