2ನೇ ಬಾರಿ ಸಿಕ್ಕಿದ್ದು, ಸಿಎಂ ಕಂಡು ಗಾಬರಿಯಾದೆ- ಬಾಲಕಿಯ ಚಟ್‍ಪಟ್ ಮಾತಿನ ವಿಡಿಯೋ ನೋಡಿ

ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ನಿಲ್ಲಿಸಿ ರಸ್ತೆ ಬದಿಯಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ಮಾತನಾಡಿಸಿದ್ದರು. ಈ ಕುರಿತು ಬಾಲಕಿ ಶಬಬ್ತಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತನ್ನ ಖುಷಿಯನ್ನು ಹಂಚಿಕೊಂಡಿದ್ದಾಳೆ.

ನಾನು ರಸ್ತೆ ಬದಿಯಲ್ಲಿ ಹೂವು ಮಾರಿಕೊಂಡು ಇದ್ದಾಗ ಸಿಎಂ ಎಚ್‍ಡಿ ಕುಮಾರಸ್ವಾಮಿ ಅದೇ ಮಾರ್ಗವಾಗಿ ಬಂದ್ರು. ಟಿವಿಯಲ್ಲಿ ನೋಡ್ತಾ ಇರ್ತಿನಲ್ವ ಹಾಗಾಗಿ ಅವರು ಮುಖ್ಯಮಂತ್ರಿ ಅಂತ ಗೊತ್ತಿತ್ತು. ಕಾರು ನಿಲ್ಲಿಸಿ ಎಷ್ಟನೇ ಕ್ಲಾಸ್ ಅಂತ ಕೇಳಿದ್ರು. ನಾನು 6ನೇ ತರಗತಿ ಅಂದೆ. ಆವಾಗ ಅವರು ಈ ರೀತಿ ಹೂವು ಮಾರಬಾರದು. ಚೆನ್ನಾಗಿ ಓದಬೇಕು ಅಂದ್ರು. ಆಯ್ತು ಅಂದೆ ಅಂತ ಬಾಲಕಿ ವಿವರಿಸಿದ್ದಾಳೆ.

ಈ ವೇಳೆ ಯಾಕೆ ಶಾಲೆಗೆ ಹೋಗಿಲ್ಲ ಅಂದ್ರು. ಬಕ್ರೀದ್ ಗೆ ರಜೆ ಕೊಟ್ಟಿದ್ದಾರೆ ಅಂದೆ. ಬಳಿಕ ಅಪ್ಪ-ಅಮ್ಮ ಏನು ಮಾಡ್ತಿದ್ದಾರೆ ಅಂತ ಮರು ಪ್ರಶ್ನೆ ಹಾಕಿದ್ರು. ಅಪ್ಪ ಲಾರಿ ಡ್ರೈವರ್ ಅಮ್ಮ ಬಟ್ಟೆ ಹೊಲಿತಾರೆ ಅಂತ ಅವರಿಗೆ ಉತ್ತರಿಸಿದೆ. ಆವಾಗ ಅವರು ಈ ತರ ಕೆಲಸ ಮಾಡಬಾರದು ಅಂತ ಹಿಂದೆ ಇರುವ ಪೊಲೀಸರ ಕೈಯಲ್ಲಿ 100 ರೂ ಕೊಟ್ರು. ನಾನು ಬೇಡ ಬೇಡ ಅಂದ್ರೂ ನನ್ನ ಕೈಯಲ್ಲಿ 100 ಇಟ್ಟು, ಅಪ್ಪ-ಅಮ್ಮನನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವಂತೆ ಹೇಳು. ನಿಮಗೇನು ವ್ಯವಸ್ಥೆ ಬೇಕು ಅದನ್ನು ಮಾಡಿಕೊಡುತ್ತೇನೆ ಅಂತ ತಿಳಿಸಿದ್ರು. ಇದನ್ನೂ ಓದಿ: ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಹೂ ಮಾರುತ್ತಿದ್ದ ಬಾಲಕಿಯ ಕಷ್ಟ ಆಲಿಸಿದ ಸಿಎಂ ಎಚ್‍ಡಿಕೆ

ಶಾಲೆಗೆ ಯಾವುದೇ ರೀತಿಯ ತೊಂದರೆಯಿಲ್ಲ ಅಂದ ಬಾಲಕಿ, ಅಪ್ಪನಿಗೆ ಸಿಎಂ ಅವರು ನನ್ನ ಭೇಟಿ ಮಾಡಿರುವ ವಿಚಾರ ಇದುವರೆಗೂ ಗೊತ್ತಾಗಿಲ್ಲ. ಆದ್ರೆ ಅಮ್ಮನ ಬಳಿ ಹೋಗಿ ಹೇಳಿದಾಗ, ಸುಳ್ಳು ಹೇಳುತ್ತಿಯಾ ಅಂದ್ರು. ಆ ಬಳಿಕ ಅವರಿಗೆ ಗೊತ್ತಾಯಿತು. ಸಿಎಂ ಅವರು ಇದು ಎರಡನೇ ಬಾರಿ ಸಿಕ್ಕಿರುವುದು. ಈ ಹಿಂದೆ ಅವರು ಚುನಾವಣೆಯಲ್ಲಿ ಗೆಲ್ಲುವ ಮೊದಲು ಇಲ್ಲಿ ಬಂದಿದ್ದರು. ಆವಾಗ ನಾನೇ ಅವರಿಗೆ ಹೂ ಹಾರ ಹಾಕಿದ್ದೆ ಎಂದು ಬಾಲಕಿ ಮುದ್ದು-ಮುದ್ದಾಗಿ ಚಟಪಟ ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡಿದಳು.

ಮನೆಯಲ್ಲಿ ತುಂಬಾನೇ ಕಷ್ಟ ಇದೆ. ಸಾಲಗಳು ಇವೆ. ಅಮ್ಮನಿಗೆ ಹುಷಾರಿಲ್ಲ. ಹೀಗಾಗಿ ಸಾಲ ತೀರಿಸಲು ಸಹಾಯ ಮಾಡಿ ಅಂತ ಸಿಎಂ ಅವರಲ್ಲಿ ಕೇಳಿಕೊಳ್ಳುತ್ತೇನೆ. ಇಂದು ಸಿಎಂ ಅವರನ್ನು ಕಂಡಾಗ ಮೊದಲು ಗಾಬರಿಯಾದೆ. ಪೊಲೀಸ್ ನವರು ಕೂಡ ನನ್ನ ಹಿಂದೆಯೇ ಓಡಿ ಬಂದ್ರು. ಹೀಗಾಗಿ ನಾನು ಅವರಲ್ಲಿ ಏನೂ ಕೇಳಿಲ್ಲ. ಅವರು ಮಾತಾಡಿಸಿದ್ದಕ್ಕೆ ನಾನೂ ಮಾತಾಡಿಸಿದೆ ಅಂತ ಬಾಲಕಿ ಮುದ್ದಾಗಿಯೇ ತಿಳಿಸಿದಳು.

ಮನೆಯಲ್ಲಿ ಕಷ್ಟ ಇರುವುದರಿಂದ ನಾನು ಸೋಮವಾರ ಶಾಲೆಗೆ ಹೋಗುತ್ತೇನೆ ಅಂತ ಹೇಳಿದ್ದೆ. ನನಗೆ ಹುಷಾರಿಲ್ಲ ಕೂಡ. ಹೀಗಾಗಿ ಅಮ್ಮ ಟೀಚರ್ ಗೆ ಫೋನ್ ಮಾಡಿ ಸೋಮವಾರದಿಂದ ಶಾಲೆಗೆ ಕಳುಹಿಸುತ್ತೇನೆ ಅಂತ ಹೇಳಿದ್ದರು ಅಂತ ಬಾಲಕಿ ಶಾಲೆಗೆ ಹೋಗದ ವಿಚಾರಕ್ಕೆ ಸ್ಪಷ್ಟನೆ ನೀಡಿದಳು.

ಸಿಎಂ ಹಾಗೂ ಬಾಲಕಿ ಮಾತನಾಡುತ್ತಿರುವುದನ್ನು ಕಂಡು ಸ್ಥಳದಲ್ಲಿ ನೆರೆದವರು ಮೂಕವಿಸ್ಮಿತರಾಗಿದ್ದಾರೆ. ಅಲ್ಲದೇ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸಿಎಂ ಹಾಗೂ ಬಾಲಕಿ ಮಾತನಾಡುತ್ತಿರುವ ಫೋಟೋ ಕ್ಲಿಕ್ಕಿಸಿ ಕಷ್ಟ ಆಲಿಸಿದ ಸಿಎಂ ಮಾನವೀಯತೆ ಕೆಲಸವನ್ನು ಶ್ಲಾಘಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *