ಮೂರುವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ ಜೀವಾವಧಿ ಶಿಕ್ಷೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಮೂರುವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಮಂಡ್ಯ 2ನೇ ಜಿಲ್ಲಾ ಸೆಷನ್‌ ಕೋರ್ಟ್‌ (Mandya Sessions Court) ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಶ್ರೀರಂಗಪಟ್ಟಣ (SriRangapatna) ತಾಲ್ಲೂಕಿನ ಬೆಳಗೊಳ ಗ್ರಾಮದ ಶಿವಣ್ಣ (59) ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. 2023ರ ಡಿ.11 ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ತನ್ನ ಮನೆಯ ಮುಂದೆ ಬಾಲಕಿ ಆಟವಾಡುತ್ತಿದ್ದಾಗ ಆರೋಪಿಯೂ ಬಾಲಕಿಯನ್ನು ಪುಸಲಾಯಿಸಿಕೊಂಡು ಪಕ್ಕದಲ್ಲೇ ಇರುವ ತನ್ನ ಮನೆಗೆ ಕರೆದುಕೊಂಡು ಹೋಗಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಮ್ಮನಿಗೆ ಹೇಳಬಾರದೆಂದು ಬೆದರಿಕೆ ಕೂಡ ಹಾಕಿದ್ದ. ಇದನ್ನೂ ಓದಿ: ತಪ್ಪಿದ ಭಾರಿ ಅನಾಹುತ: ಆಯತಪ್ಪಿ ಬಿದ್ದ ನಟಿ

ನಂತರ ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕೃಷ್ಣರಾಜ ಸಾಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ 2012ರ ಅಡಿಯಲ್ಲಿ ದೂರು ದಾಖಲಾಗಿತ್ತು. ಅಂದಿನ ಪಿಎಸ್‌ಐ ಬಸವರಾಜು ಅವರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಈ ಹಿಂದೆ ಕೃಷ್ಣರಾಜ ಸಾಗರ ವೃತ್ತ ನಿರೀಕ್ಷಕರಾಗಿದ್ದ ಪುನೀತ್ ಟಿ.ಎಂ. ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ದರ್ಶನ್‌ಗೆ ಮಾದರಿಯಾದ ಸಂಜು ಬಸಯ್ಯ – ಪತ್ನಿಗೆ ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಬುದ್ಧಿ ಹೇಳಿದ ನಟ

ಕೃಷ್ಣರಾಜ ಸಾಗರ ಠಾಣೆಯ ಪಿಎಸ್‌ಐ ರಮೇಶ್ ಕರಕೀಕಟ್ಟಿ ಹಾಗೂ ಸಿಬ್ಬಂದಿಯವರಾದ ಎಎಸ್‌ಐ ಸತೀಶ್, ಸಿಬ್ಬಂದಿ ಯಧುರಾಜ್, ರೇಣುಕುಮಾರ್, ಅಶ್ವಿನಿ, ಪುಟ್ಟಲಕ್ಷ್ಮಿ ಅವರು ತನಿಖಾ ತಂಡದಲ್ಲಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ದಿಲೀಪ್ ಕುಮಾರ್ ಶುಕ್ರವಾರ (2025 ಜೂನ್ 11) ಆರೋಪಿಗೆ ಜೀವಿತಾವಧಿ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಬ್ಬಕವಾಡಿ ನಾಗರಾಜು ಅವರು ಸಂತ್ರಸ್ಥರ ಪರ ವಾದ ಮಂಡಿಸಿದ್ದರು. ಕೃಷ್ಣರಾಜ ಸಾಗರ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.