7ರ ಪೋರಿಯನ್ನ ಬಲಿ ಪಡೆದ ಬೆಸ್ಕಾಂ- ಅರ್ಥಿಂಗ್ ಕೇಬಲ್ ತುಳಿದು ಬಾಲಕಿ ಸಾವು

ಚಿಕ್ಕಬಳ್ಳಾಪುರ: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ರಸ್ತೆ ಪಕ್ಕದಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಗೆ ಅಳವಡಿಸಿದ್ದ ಅರ್ಥಿಂಗ್ ವಿದ್ಯುತ್ ತಂತಿ ತಾಗಿ ಏಳು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡತತ್ತಮಂಗಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾಗಪ್ಪ ಮತ್ತು ಮಂಜುಳ ದಂಪತಿಯ ಪುತ್ರಿ ಚರಣ್ಯ (7) ಮೃತಪಟ್ಟಿರುವ ಬಾಲಕಿ. ಮೃತ ಬಾಲಕಿ ಗ್ರಾಮದ ಮುಖ್ಯ ರಸ್ತೆಯಲ್ಲಿ ತಮ್ಮ ಮನೆಗೆ ನಡೆದುಕೊಂಡು ತೆರಳುತ್ತಿದ್ದ ವೇಳೆ ರಸ್ತೆಯ ಪಕ್ಕದಲ್ಲೆ ಶಿಥಿಲಾವ್ಯಸ್ಥೆಯಿಂದ ಕೂಡಿದ್ದ ಟ್ರಾನ್ಸ್ ಫಾರ್ಮರ್ ಗೆ ಹಾಕಲಾಗಿದ್ದ ಅರ್ಥಿಂಗ್ ತಂತಿ ಮೇಲೆ ಎದ್ದಿದ್ದು, ಬಾಲಕಿ ತಂತಿಯನ್ನ ತುಳಿದಾಗ ವಿದ್ಯುತ್ ಸ್ಪರ್ಶಿಸಿದೆ.

ಪೋಷಕರು ಬಾಲಕಿಯನ್ನ ಕೂಡಲೇ ಆಸ್ಪತ್ರೆಗೆ ರವಾನೆ ಮಾಡುವ ಪ್ರಯತ್ನ ಮಾಡಿದರೂ, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಶಿಥಿಲಾವಸ್ಥೆಯಿಂದ ಕೂಡಿದ್ದ ಟ್ರಾನ್ಸ್ ಫಾರ್ಮರ್ ಸರಿಪಡಿಸುವಂತೆ ಈ ಹಿಂದೆಯೂ ಗ್ರಾಮಸ್ಥರು ಬೆಸ್ಕಾಂಗೆ ಮನವಿ ಮಾಡಿದ್ದರು ಎನ್ನಲಾಗಿದ್ದು, ಆದರೆ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದೇ ಬಾಲಕಿ ಸಾವಿಗೆ ಕಾರಣ ಎಂದು ಮೃತ ಬಾಲಕಿಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Comments

Leave a Reply

Your email address will not be published. Required fields are marked *