ಮದುವೆಯಾಗಿ ಹಣ, ಚಿನ್ನದೊಂದಿಗೆ ಎಸ್ಕೇಪ್‌ ಆಗ್ತಿದ್ದ ಮಹಿಳೆಗೆ ಹೆಚ್‌ಐವಿ – ಆಕೆ ದೈಹಿಕ ಸಂಪರ್ಕಕ್ಕೆ ಬಂದ ಪುರುಷರಿಗಾಗಿ ಹುಡುಕಾಟ

ಡೆಹ್ರಾಡೂನ್: ಮದುವೆಯಾಗಿ ನಗದು, ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿ ಅನೇಕ ಪುರುಷರನ್ನು ಯಾಮಾರಿಸಿದ್ದ ಮಹಿಳೆ ಈಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವೈದ್ಯಕೀಯ ತಪಾಸಣೆ ವೇಳೆ ಆಕೆಗೆ ಹೆಚ್‌ಐವಿ ಪಾಸಿಟಿವ್‌ ಬಂದಿರುವುದು ಪೊಲೀಸರಿಗೆ ಶಾಕ್‌ ನೀಡಿದೆ.

ಮದುವೆ ಹೆಸರಿನಲ್ಲಿ ಅನೇಕ ಪುರುಷರನ್ನು ವಂಚಿಸಿದ್ದ ಮಹಿಳೆಯರು ಮೇ 6 ರಂದು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದರು. ಯುಪಿ ಮತ್ತು ಉತ್ತರಾಖಂಡದ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಕೆಯ ಗ್ಯಾಂಗ್‌ನ 6 ಸದಸ್ಯರನ್ನೂ ಬಂಧಿಸಿದ್ದು, ಪುಜಾಫರ್‌ನಗರ ಜೈಲಿಗೆ ಕಳುಹಿಸಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಗೆ ಹೆಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ. ಬಂಧಿತ ಮಹಿಳೆ ಈಗ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ)ಗೆ ಒಳಗಾಗುತ್ತಿದ್ದಾಳೆ ಎಂದು ಜೈಲು ಅಧೀಕ್ಷಕ ಸೀತಾರಾಮ್ ಶರ್ಮಾ ಹೇಳಿದ್ದಾರೆ.

ಮಹಿಳೆಗೆ ಹೆಚ್‌ಐವಿ ಇರುವುದು ದೃಢಪಟ್ಟಿರುವುದು ಎರಡೂ ರಾಜ್ಯಗಳ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗ ಅವಳ ಜೊತೆ ಮದುವೆಯಾಗಿ ಯಾಮಾರಿದ್ದ ಪುರುಷರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ.

ಉತ್ತರಾಖಂಡದ ಆರೋಗ್ಯ ಇಲಾಖೆಯು, ರಾಜ್ಯದೊಳಗೆ ಆಕೆ ದೈಹಿಕ ಸಂಪರ್ಕಕ್ಕೆ ಬಂದ ಮೂವರು ಪುರುಷರು ಈಗ ಹೆಚ್ಐವಿ ಪಾಸಿಟಿವ್ ಎಂದು ದೃಢಪಡಿಸಿದ್ದಾರೆ. ಉಧಮ್ ಸಿಂಗ್ ನಗರದ ಆರೋಗ್ಯ ಇಲಾಖೆಯು ಎನ್‌ಜಿಒ ಸಹಯೋಗದೊಂದಿಗೆ ಈ ಪುರುಷರಲ್ಲಿ ಪರೀಕ್ಷೆಗಳನ್ನು ನಡೆಸಿ ART ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಪುರುಷರ ಕುಟುಂಬದ ಇತರೆ ಸದಸ್ಯರನ್ನೂ ಪರೀಕ್ಷಿಸುವ ಪ್ರಕ್ರಿಯೆ ನಡೆಯುತ್ತಿದೆ.

ಇದುವರೆಗೆ ಆರೋಪಿ ಮಹಿಳೆ ಐದು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಐವರ ಪೈಕಿ ಮೂವರು ಪುರುಷರು ಉತ್ತರಾಖಂಡ ರಾಜ್ಯದವರೇ ಆಗಿದ್ದಾರೆ. ಆದರೆ ಆಕೆ ಇನ್ನೂ ಹೆಚ್ಚಿನ ಮಂದಿಗೆ ಮದುವೆಯಾಗಿ ವಂಚಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.