ಬ್ರಿಟನ್‌ನಲ್ಲಿ ತ್ರಿವರ್ಣ ಧ್ವಜ ತೆಗೆದಿದ್ದ ಖಲಿಸ್ತಾನಿ ಉಗ್ರ ಅವತಾರ್ ಸಿಂಗ್ ನಿಗೂಢ ಸಾವು

ಲಂಡನ್‌: ಖಲಿಸ್ತಾನಿ ಉಗ್ರ ಅಮೃತಪಾಲ್ ಸಿಂಗ್ (Amritpal Singh) ಆಪ್ತ, ಬ್ರಿಟನ್ ಮೂಲದ ಖಲಿಸ್ತಾನ್ ಲಿಬರೇಷನ್ ಫೋರ್ಸ್ (ಕೆಎಲ್‌ಎಫ್) ಮುಖ್ಯಸ್ಥ ಅವತಾರ್ ಸಿಂಗ್ ಖಂಡಾ (Avtar Singh Khanda) ನಿಗೂಢವಾಗಿ ಸಾವನ್ನಪ್ಪಿದ್ದಾನೆ.

ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷ ಉಣಿಸಿ ಸಾಯಿಸಲಾಗಿದೆ ಎಂದು ಶಂಕೆ ವ್ಯಕ್ತವಾದರೂ ವೈದ್ಯಕೀಯ ದಾಖಲೆಗಳು ರಕ್ತ ಕ್ಯಾನ್ಸರ್ ಎಂದು ಹೇಳಿವೆ.  ಅವತಾರ್ ಸಿಂಗ್ ಖಂಡಾನ ಆರೋಗ್ಯದಲ್ಲಿ ಸೋಮವಾರ ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಯಾರು ಅವತಾರ್ ಸಿಂಗ್?
2007ರಲ್ಲಿ ಶಿಕ್ಷಣ ವೀಸಾದಡಿ ಬ್ರಿಟನ್‌ಗೆ ತೆರಳಿದ್ದ ಅವತಾರ್ ಸಿಂಗ್ 2012ರಿಂದ ಅಲ್ಲಿಯೇ ನೆಲೆಸಿದ್ದ. ಬಾಂಬ್ ತಜ್ಞನಾಗಿದ್ದ ಖಂಡಾ, ಲಂಡನ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಯ ಮೇಲೆ ಆಕ್ರಮಣ ಮಾಡಿಸಿದವರ ಪೈಕಿ ಈತ ಪ್ರಮುಖ ಆರೋಪಿಯಾಗಿದ್ದ. ದೂತವಾಸ ಕಚೇರಿ ಮೇಲಿದ್ದ ತ್ರಿವರ್ಣ ಧ್ವಜ ತೆಗೆದು ಖಲಿಸ್ತಾನ್‌ ಧ್ವಜ ಹಾರಿಸಿದ್ದ. ಇದನ್ನೂ ಓದಿ: ದೆಹಲಿಯ ಬ್ರಿಟಿಷ್‌ ಹೈಕಮೀಷನ್‌ಗೆ ನೀಡಿದ ಭದ್ರತೆ ತೆಗೆದು ಯುಕೆಗೆ ಬಿಸಿ ಮುಟ್ಟಿಸಿದ ಭಾರತ

ಪಂಜಾಬ್ ಪೊಲೀಸರು ಮಾರ್ಚ್‌ ಮತ್ತು ಏಪ್ರಿಲ್‌ ಅವಧಿಯಲ್ಲಿ ಖಲಿಸ್ತಾನಿ ಮುಖಂಡ ಅಮೃತಪಾಲ್ ಸಿಂಗ್‌ ಬಂಧನಕ್ಕೆ ತೀವ್ರ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆತ ತಲೆಮರೆಸಿಕೊಳ್ಳಲು ಅವತಾರ್ ಖಾಂಡಾ ನೆರವಾಗಿದ್ದ. ಅಮೃತಪಾಲ್‌ನನ್ನು ಪೊಲೀಸರು ಬೆನ್ನತ್ತುವಾಗ ಆತ ಲಂಡನ್‌ನಲ್ಲಿದ್ದ ಅವತಾರ್ ಜತೆ ಸಂಪರ್ಕದಲ್ಲಿದ್ದ ವಿಚಾರ ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಬ್ರಿಟನ್‌ನಲ್ಲಿ ರಾಂಜೋಥ್ ಸಿಂಗ್ ಎಂಬ ಸಂಕೇತಾಕ್ಷರದ ಹೆಸರಿನಲ್ಲಿ ವಾಸಿಸುತ್ತಿದ್ದ ಈತ ದೀಪ್ ಸಿಧು ಮರಣದ ನಂತರವ ವಾರಿಸ್ ಪಂಜಾಬ್ ದೆ ಸಂಘಟನೆಯ ಅಧಿಕಾರ ಅಮೃತಪಾಲ್ ಸಿಂಗ್‌ಗೆ ಸಿಗುವಂತೆ ಮಾಡುವಲ್ಲಿ ಖಾಂಡಾ ಪ್ರಮುಖ ಪಾತ್ರವಹಿಸಿದ್ದ.

ಪಂಜಾಬ್‌ನ ರಾಜಕೀಯ ಪಕ್ಷ ಶಿರೋಮಣಿ ಅಕಾಲಿ ದಳದ ಜತೆಗೂ ಗುರುತಿಸಿಕೊಂಡಿದ್ದ ಅವತಾರ್ ಖಾಂಡಾನ ತಂದೆ ಕುಲ್ವಂತ್ ಸಿಂಗ್ ಕೂಡ ಕೆಎಲ್‌ಎಫ್ ಉಗ್ರನಾಗಿದ್ದು, ಆತನನ್ನು ಹತ್ಯೆ ಮಾಡಲಾಗಿತ್ತು.