ಹಿರಿ-ಕಿರಿಯರೆಲ್ಲರೂ ಡಿಕೆಶಿ ಬೆಂಬಲಿಸಿ: ಮಲ್ಲಿಕಾರ್ಜುನ ಖರ್ಗೆ ಕಿವಿ ಮಾತು

ಬೆಂಗಳೂರು: ಕೆಪಿಸಿಸಿಗೆ ನೂತನ ಸಾರಥಿಯಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್ ಪರ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್ ಮಾಡಿದ್ದಾರೆ. ಹಾಗೆಯೇ ಕಾಂಗ್ರೆಸ್ಸಿನಲ್ಲಿ ಬಣ ರಾಜಕಾರಣ, ಗುಂಪುಗಾರಿಕೆ ಮಾಡೋರಿಗೇ ಮಲ್ಲಿಕಾರ್ಜುನ ಖರ್ಗೆಯವರು ಖಡಕ್ ಸಂದೇಶ ರವಾನಿಸಿದ್ದಾರೆ.

ಬೆಂಗಳೂರಿನ ಸದಾಶಿವ ನಗರದಲ್ಲಿ ಇರುವ ಮಲ್ಲಿಕಾರ್ಜುನ ಖರ್ಗೆಯವರ ನಿವಾಸಕ್ಕೆ ಇಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ್ದರು. ಖರ್ಗೆಯವರನ್ನು ಭೇಟಿ ಮಾಡಿದ ಡಿಕೆಶಿ ಕೃತಜ್ಞತೆ ಅರ್ಪಿಸಿ ಆಶೀರ್ವಾದ ಪಡೆದರು. ಬಳಿಕ ಮಲ್ಲಿಕಾರ್ಜುನ ಖರ್ಗೆಯವರು ಡಿಕೆಶಿ ಕೈ ಬಲಪಡಿಸುವಂತೆ ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ಕೊಟ್ಟರು.

ಮಾಧ್ಯಮಗಳ ಜೊತೆ ಮಾತಾಡಿದ ಮಲ್ಲಿಕಾರ್ಜುನ ಖರ್ಗೆಯವರು, ಡಿಕೆ ಶಿವಕುಮಾರ್ ಅವರು ಹೊಸದಾಗಿ ಕೆಪಿಸಿಸಿಗೆ ನೇಮಕ ಆಗಿದಾರೆ. ಡಿಕೆಶಿ ಜೊತೆಯಲ್ಲಿ ಅವರು ಬಯಸಿದ ಟೀಮ್ ಕೂಡ ಜೊತೆಯಲ್ಲಿ ಬಂದಿದೆ. ಎಲ್ಲ ಯಂಗ್‍ಸ್ಟರ್ಸ್ ಇದ್ದಾರೆ. ಡಿಕೆ ಶಿವಕುಮಾರ್ ಪಕ್ಷದ ಬಲವರ್ಧನೆ ಮಾಡೋ ನಂಬಿಕೆ ಇದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

ಯಾವುದೇ ಒಬ್ಬ ವ್ಯಕ್ತಿಯಿಂದ ಪಕ್ಷ ಬಲಪಡಿಸಲು ಆಗಲ್ಲ. ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರು ಡಿಕೆಶಿಗೆ ಬೆಂಬಲಿಸಬೇಕು. ಎಲ್ಲರೂ ಡಿಕೆಶಿಗೆ ಬೆಂಬಲಿಸಿದರೆ ಮಾತ್ರ ಕೆಲಸ ಮಾಡಲು ಸಾಧ್ಯ. ವ್ಯಕ್ತಿ ಎಷ್ಟೇ ಸಮರ್ಥ ಇದ್ದರೂ ಬೇರೆಯವರ ಬೆಂಬಲ ಅಗತ್ಯ. ಡಿಕೆಶಿಗೆ ಎಲ್ಲರೂ ಸೇರಿ ಬಲಪಡಿಸಲಿ, ಪಕ್ಷ ಬಲಪಡಿಸಲಿ ಎಂದು ಕಾಂಗ್ರೆಸ್ಸಿನಲ್ಲಿ ಬಣ ರಾಜಕಾರಣ ಮಾಡೋರಿಗೆ ಖರ್ಗೆಯವರು ಕಿವಿಮಾತು ಹೇಳಿದರು.

ಬಳಿಕ ಮಾತಾಡಿದ ಡಿ.ಕೆ ಶಿವಕುಮಾರ್, ನಾನು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತೇನೆ. ನನಗೆ ಎಲ್ಲರೂ ಜೊತೆ ಇದ್ದರೆ ಮಾತ್ರ ಪಕ್ಷ ಕಟ್ಟಲು ಸಾಧ್ಯ. ಹಿರಿಯರು, ಕಿರಿಯರು, ಯುವಕರು, ಮಹಿಳೆಯರು ಎಲ್ಲರ ಪಾಲ್ಗೊಳ್ಳುವಿಕೆ ಬೇಕು. ಇವರೆಲ್ಲರೂ ಇದ್ದರೆ ಮಾತ್ರ ನಮ್ಮ ಪಕ್ಷ ಸಶಕ್ತವಾಗಿರಲಿದೆ ಎಂದು ಡಿಕೆಶಿ ಹೇಳಿದರು.

ದೆಹಲಿಗೆ ಹೋಗುವ ವಿಚಾರ ಕುರಿತು ಮಾತಾಡಿದ ಶಿವಕುಮಾರ್, ದೆಹಲಿಗೆ ನಾನೊಬ್ಬನೇ ಹೋಗುವುದಿಲ್ಲ. ನಮ್ಮೆಲ್ಲ ನಾಯಕರನ್ನು ಕರೆದುಕೊಂಡು ಹೋಗ್ತೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಂಬಂಧ ಎಲ್ಲರ ಜೊತೆ ಚರ್ಚಿಸಿ ನಿರ್ಧರಿಸುವುದಾಗಿ ಇದೇ ವೇಳೆ ಡಿಕೆಶಿ ತಿಳಿಸಿದರು.

Comments

Leave a Reply

Your email address will not be published. Required fields are marked *