ವಾಕಿಂಗ್ ಹೋಗಿದ್ದಾಗ ಭದ್ರತಾ ಲೋಪ – ಬೈಕ್ ಡಿಕ್ಕಿಯಿಂದ ಸ್ವಲ್ಪದರಲ್ಲೇ ಪಾರಾದ ನಿತೀಶ್ ಕುಮಾರ್

– ಅಪಘಾತದಿಂದ ತಪ್ಪಿಸಿಕೊಳ್ಳಲು ಫುಟ್‌ಪಾತ್‌ಗೆ ಜಿಗಿದ ಬಿಹಾರ ಸಿಎಂ

ಪಾಟ್ನಾ: ಬಿಹಾರದ ಮುಖ್ಯಮಂತ್ರಿ (Bihar CM) ನಿತೀಶ್ ಕುಮಾರ್ (Nitish Kumar) ಅವರು ಬೆಳಗ್ಗೆ ವಾಕಿಂಗ್ ಹೋಗಿದ್ದಾಗ ಭದ್ರತಾ ಲೋಪ (Security Breach) ಸಂಭವಿಸಿದೆ. ವೇಗವಾಗಿ ಬಂದ ಬೈಕ್‌ಗೆ (Bike) ಡಿಕ್ಕಿ ಹೊಡೆಯುವುದರಿಂದ ಬಿಹಾರದ ಸಿಎಂ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ.

ನಿತೀಶ್ ಕುಮಾರ್ ಅವರು ಪಾಟ್ನಾದ ತಮ್ಮ ನಿವಾಸದ ಬಳಿ ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ಬೈಕ್ ಸವಾರನೊಬ್ಬ ಅವರ ಭದ್ರತಾ ಕವಚವನ್ನು ಬೇಧಿಸಿದ್ದಾನೆ. ಮಾತ್ರವಲ್ಲದೇ ನಿತೀಶ್ ಕುಮಾರ್ ಇದ್ದೆಡೆಗೆ ಬೈಕ್ ಅನ್ನು ನುಗ್ಗಿಸಿದ್ದಾನೆ. ಈ ವೇಳೆ ನಿತೀಶ್ ಕುಮಾರ್ ಅವರು ಬೈಕ್ ಡಿಕ್ಕಿಯಿಂದ ತಪ್ಪಿಸಿಕೊಳ್ಳಲು ಫುಟ್‌ಪಾತ್‌ಗೆ ಜಿಗಿದಿದ್ದಾರೆ. ಇದನ್ನೂ ಓದಿ: ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ – ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ವಿದ್ಯಾರ್ಥಿಗಳು

ಘಟನೆ ನಡೆದ ತಕ್ಷಣ ಸ್ಪೆಷಲ್ ಸೆಕ್ಯುರಿಟಿ ಗ್ರೂಪ್ (SSG) ಕಮಾಂಡೋಗಳು ಹಾಗೂ ಪಾಟ್ನಾ ಪೊಲೀಸರು ಸೇರಿದಂತೆ ಭದ್ರತಾ ಅಧಿಕಾರಿಗಳು ಬೈಕ್ ಸವಾರನನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬೈಕ್ ಸವಾರನ ಅನುಮಾನಾಸ್ಪದ ವರ್ತನೆಗೆ ಆತನ ಹಿಂದಿನ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

2018ರಲ್ಲಿ ನಿತೀಶ್ ಕುಮಾರ್ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಯಿತು. ಘಟನೆಯ ಬಳಿಕ ಎಸ್‌ಎಸ್‌ಜಿ ಕಮಾಂಡೆಂಟ್ ಹಾಗೂ ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅವರನ್ನು ಮುಖ್ಯಮಂತ್ರಿ ನಿವಾಸಕ್ಕೆ ಕರೆಸಲಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು