ಬಾಪೂಜಿ ನಗರದಲ್ಲಿ ಹೆಸರಿಗೆ ಮಾತ್ರ ಸೀಲ್‍ಡೌನ್-ಉಚಿತ ಹಾಲಿಗಾಗಿ ಗುಂಪು ಸೇರಿದ ಜನ

ಬೆಂಗಳೂರು: ರಾಜಧಾನಿಯ ಪಾದರಾಯನಪುರ ಮತ್ತು ಬಾಪೂಜಿ ನಗರದಲ್ಲಿ ಸೀಲ್‍ಡೌನ್ ಮಾಡಲಾಗಿದೆ. ಆದ್ರೆ ಈ ಎರಡೂ ಪ್ರದೇಶದಲ್ಲಿ ಹೆಸರಿಗೆ ಮಾತ್ರ ಸೀಲ್ ಆಯ್ತಾ ಪ್ರಶ್ನೆ ಹುಟ್ಟಿಕೊಂಡಿದೆ. ಸೀಲ್‍ಡೌನ್ ಆಗಿದ್ದರೂ ಜನರು ಮಾತ್ರ ಎಂದಿನಂತೆ ಕುಂಟು ನೆಪಗಳನ್ನು ಹೇಳುತ್ತಾ ಬಡವಾಣೆಗಳಲ್ಲಿ ತಿರುಗಾಡುತ್ತಿದ್ದರೆ, ಕೆಲವರು ಉಚಿತ ಹಾಲು ಪಡೆಯಲು ಮುಗಿಬೀಳುತ್ತಿದ್ದಾರೆ.

ಪಾದರಾಯನಪುರದ ವಾರ್ಡ್ ನಂಬರ್ 134, 135, 136 ಜನರು ಎಂದಿನಂತೆ ಮನೆಯಿಂದ ಹೊರ ಬರುತ್ತಿದ್ದಾರೆ. ಸೀಲ್‍ಡೌನ್ ಆಗಿದ್ರೂ ಜನರು ಮಾತ್ರ ಹೊರಗೆ ಓಡಾಡುವುದನ್ನು ಕಡಿಮೆ ಮಾಡಿಲ್ಲ. ವಾಹನಗಳಲ್ಲಿ ಜನ ಹೊರಗೆ ಬಂದು ಬೆಂಗಳೂರಿನ ಬೇರೆ ಏರಿಯಾಗಳತ್ತ ಹೊರಟ್ಟಿದ್ದಾರೆ. ಇನ್ನು ಖಾಸಗಿ ವಾಹನಗಳು ಮತ್ತು ಆಟೋ ಚಾಲಕರು ಲಾಕ್‍ಡೌನ್ ಲಾಭ ಪಡೆಯಲು ಮುಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದಾರೆ.

ಇನ್ನು ಬಾಪೂಜಿ ನಗರದಲ್ಲಿ ಜನರು ಉಚಿತ ಹಾಲು ಪಡೆಯಲು ಬಂದು ಕ್ಯೂ ನಿಂತಿರುವ ದೃಶ್ಯಗಳು ಇಂದು ಬೆಳಗ್ಗೆ ಕಂಡುಬಂದವು. ಹಾಲು ಪಡೆಯಬೇಕೆಂದು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುತ್ತಿಲ್ಲ. ಬಾಪೂಜಿ ನಗರದ ಬಹುತೇಕರಿಗೆ ಉಚಿತ ಹಾಲು ಸಿಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ಥಳೀಯ ಕಾರ್ಪೋರೇಟರ್ ಅಜ್ಮಲ್ ಬೇಗ್ ವಿರುದ್ಧ ಆಕ್ರೋಶ ಹೊರ ಹಾಕಿದರು.

ಉಚಿತ ಹಾಲು ಕೊಡದೇ ಪ್ರತಿನಿತ್ಯ ಕಾರ್ಪೋರೇಟರ್ ಮೋಸ ಮಾಡುತ್ತಿದ್ದಾರೆ. ಉಚಿತ ಹಾಲು ಕಾರ್ಪೋರೇಟರ್ ಬೆಂಬಲಿಗರ ಪಾಲಾಗುತ್ತಿದೆ. ನಿನ್ನೆಯೂ ಇದೇ ರೀತಿ ಹಾಲು ನೀಡಲಿಲ್ಲ. ಇವತ್ತು ಇಷ್ಟು ಸಮಯ ಸರತಿಯಲ್ಲಿ ನಿಂತ್ರೂ ಹಾಲು ಸಿಗಲಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.

Comments

Leave a Reply

Your email address will not be published. Required fields are marked *