ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ 400 ವರ್ಷದ ಸಂಪ್ರದಾಯ ಮುರಿದ ಗಂಡಸರು!

ಭುವನೇಶ್ವರ್: ಸಮುದ್ರದ ಮಟ್ಟ ಏರಿಕೆಯಾಗಿ ಒಡಿಶಾದ 400 ವರ್ಷ ಹಳೆಯ ದೇವಸ್ಥಾನದಲ್ಲಿನ ವಿಗ್ರಹಗಳನ್ನು ಸ್ಥಳಾಂತರಿಸಲಾಗಿದೆ.

ಸತಾಭಯ ಹಳ್ಳಿಯ ಸಮುದ್ರ ತೀರದ ಮಾ ಪಂಚಬರಾಹಿ ದೇವಾಲಯದಲ್ಲಿರುವ ಗರ್ಭಗುಡಿಯ ವಿಗ್ರಹಗಳನ್ನು ಗಂಡಸರು ಮುಟ್ಟುವ ಅಥವಾ ಪೂಜೆ ಮಾಡುವ ಹಾಗೆ ಇರಲಿಲ್ಲ. ಸ್ಥಳೀಯ ಮೀನುಗಾರ ಸಮುದಾಯದ ಮದುವೆಯಾದ ಮಹಿಳೆಯರು ಮಾತ್ರ ದೇವರುಗಳನ್ನು ಪೂಜಿಸಬಹುದಾಗಿತ್ತು.

ಪೂಜೆಗೆ 400 ವರ್ಷಗಳಲ್ಲಿ ಯಾವುದೇ ಅಡಚಣೆಯಾಗಿರಲಿಲ್ಲ. ಆದರೆ ಈಗ ಹವಾಮಾನ ಬದಲಾವಣೆಯಿಂದಾಗಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ದೇವಸ್ಥಾನದ ಅಸ್ತಿತ್ವಕ್ಕೆ ಪ್ರಶ್ನೆಯಾಗಿದೆ. ಈ ಕಾರಣಕ್ಕೆ ಸಮುದ್ರ ತೀರದಿಂದ ಸುಮಾರು 12 ಕಿಮೀ ದೂರವಿರುವ ಬಾಗಪತ್ಯ ದೇವಸ್ಥಾನಕ್ಕೆ ವಿಗ್ರಹಗಳನ್ನು ಸ್ಥಳಾಂತರ ಮಾಡಲಾಗಿದೆ. ಒಂದೊಂದು ವಿಗ್ರಹವು 1.5 ಟನ್ ತೂಕವಿದ್ದ ಕಾರಣ ಮಹಿಳೆಯರಿಗೆ ಸ್ಥಳಾಂತರಿಸಲು ಆಗುತ್ತಿರಲಿಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೆ ಪುರುಷರು ಈ ಕಾರ್ಯದಲ್ಲಿ ಭಾಗಿಯಾಗುವ ಮೂಲಕ 400 ವರ್ಷದ ಸಂಪ್ರದಾಯವನ್ನು ಮುರಿದಿದ್ದಾರೆ.

ಭಾರವಾದ ಕಪ್ಪು ವಿಗ್ರಹಗಳನ್ನು ಸ್ಥಳಾಂತರಿಸಲು ಗಂಡಸರು ಮತ್ತು ಶಿಲ್ಪಿಗಳ ಸಹಾಯ ಪಡೆಯಬೇಕಾಯಿತು ಎಂದು ದೇವಾಲಯವನ್ನು ಪೂಜೆ ಮಾಡುತ್ತಿರುವ ಐದು ಮಂದಿ ಮಹಿಳೆಯರಲ್ಲಿ ಒಬ್ಬರಾಗಿರುವ ಸಬಿತಾ ದಾಲಿ ಹೇಳಿದ್ದಾರೆ.

ಸ್ಥಳಾಂತರಗೊಂಡ ಮೇಲೆ ಮಹಿಳೆಯರು ಶಾಸ್ತ್ರೋಕ್ತವಾಗಿ ಪೂಜೆಗಳನ್ನು ನೆರವೇರಿಸುವ ಮೂಲಕ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ. 50 ವರ್ಷದ ಕೆಳಗೆ ದೇವಸ್ಥಾನ ಸಮುದ್ರದಿಂದ 5 ಕಿಮೀ ದೂರದಲ್ಲಿತ್ತು. ಈಗ ಕೆಲವೇ ಮೀಟರ್ ಹತ್ತಿರಕ್ಕೆ ಬಂದಿರುವ ಕಾರಣ ಮೀನುಗಾರರು ಆತಂಕಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *