SCSP – TSP ಯೋಜನೆಯ 14 ಸಾವಿರ ಕೋಟಿ ಹಣ ಕಾಂಗ್ರೆಸ್‌ ಗ್ಯಾರಂಟಿಗೆ ಬಳಕೆ

– ಸರ್ಕಾರದಿಂದ ಮಹತ್ವದ ತೀರ್ಮಾನ ಪ್ರಕಟ
– ಒಟ್ಟು ಹಣದಲ್ಲಿ14,282 ಕೋಟಿ ರೂ. ಬಳಕೆ

ಬೆಂಗಳೂರು: ಗ್ಯಾರಂಟಿ (Congress Guranntee) ಹೊಡೆತದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಇನ್ನೊಂದು ಮಾರ್ಗವನ್ನು ಹುಡುಕಿದೆ. ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆಂದು (TSP) ಬಜೆಟ್‌ನಲ್ಲಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ಸರ್ಕಾರ ಮುಂದಾಗಿದೆ.

ಹೌದು, ಗ್ಯಾರಂಟಿ ಯೋಜನೆ ಜಾರಿ ಮಾಡಿ ಈಗಾಗಲೇ ಸಾಕಷ್ಟು ಹೊಡೆತ ತಿಂದು ಅನುದಾನ ಹೊಂದಿಸಲು ಶ್ರಮ ಪಡುತ್ತಿರುವ ಸರ್ಕಾರ ಈಗ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ಬಜೆಟ್‌ನಲ್ಲಿ ಮೀಸಲಿಟ್ಟ ಒಟ್ಟು ಹಣದಲ್ಲಿ14,282 ಕೋಟಿ ರೂ. ಹಣವನ್ನು  ಗ್ಯಾರಂಟಿ ಯೋಜನೆಗಳಿಗೆ ಬಳಸಲು ಅನುಮತಿ ನೀಡಿದೆ.

2024-25ನೇ ಆರ್ಥಿಕ ವರ್ಷದಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ಮೀಸಲಿಟ್ಟ 39,121.46 ಕೋಟಿ ರೂ. ಹಣವನ್ನು ಖರ್ಚು ಮಾಡುವ ಪ್ರಸ್ತಾವವುಳ್ಳ ಕ್ರಿಯಾ ಯೋಜನೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್ ಶುಕ್ರವಾರ ಅನುಮೋದನೆ ನೀಡಿದೆ. ಇದನ್ನೂ ಓದಿ: ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡಿದ್ರೆ 500ರೂ. ದಂಡ- ಬಿಬಿಎಂಪಿ ಆಯುಕ್ತ ಎಚ್ಚರಿಕೆ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುದಾನ ವರ್ಗಾವಣೆಗೆ ತೀರ್ಮಾನ ಕೈಗೊಂಡು ಅನುಮತಿ ನೀಡಲಾಗಿದೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ಅನುದಾನಲ್ಲಿ ಅದೇ ವರ್ಗದ ಗ್ಯಾರಂಟಿ ಫಲಾನುಭವಿಗಳಿಗೆ ಮಾತ್ರ ಹಣವನ್ನು ಬಳಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಮೂಲಕ ಆರ್ಥಿಕ ಹೊರೆಯನ್ನ ಕಡಿಮೆ ಮಾಡಿಕೊಳ್ಳಲು ಸರ್ಕಾರ ತಂತ್ರ ಮಾಡಿದೆ.

ಯಾವ ಗ್ಯಾರಂಟಿಗೆ ಎಷ್ಟು ಹಣ ಮೀಸಲು?
ಯುವನಿಧಿ – 175 ಕೋಟಿ ರೂ.
ಶಕ್ತಿ – 1451 ಕೋಟಿ ರೂ.
ಗೃಹ ಲಕ್ಷ್ಮೀ – 7,881 ಕೋಟಿ ರೂ.
ಅನ್ನಭಾಗ್ಯ ನಗದು– 2,187 ಕೋಟಿ ರೂ.
ಗೃಹ ಜ್ಯೋತಿ- 2,585 ಕೋಟಿ ರೂ.

ಬಿಜೆಪಿ ಹಿಂದಿನಿಂದಲೂ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗೆ ಬಳಸಲು ವಿರೋಧ ವ್ಯಕ್ತಪಡಿಸಿತ್ತು. ಎಸ್‌ಪಿ ಮತ್ತು ಟಿಎಸ್‌ಪಿಗೆ ಮೀಸಲಿಟ್ಟ ಹಣ ಆ ಸಮುದಾಯದ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕೆಂಬ ನಿಯಮವಿದೆ. ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನೆ ಮಾಡಿತ್ತು.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಗ್ಯಾರಂಟಿ ಯೋಜನೆಗೆ ಹಣವನ್ನು ಎಲ್ಲಿಂದ ಹೊಂದಿಸುತ್ತೀರಿ ಎಂದು ಕೇಳಿದ್ದಕ್ಕೆ ಬಿಜೆಪಿಯ 40% ಕಮಿಷನ್‌ ಹಣವನ್ನು ಬಳಕೆ ಮಾಡಿದರೆ 5 ಗ್ಯಾರಂಟಿ ಯೋಜನೆಯನ್ನು ಸುಲಭವಾಗಿ ಜಾರಿಗೆ ತರಬಹುದು ಎಂದು ಕಾಂಗ್ರೆಸ್‌ ನಾಯಕರು ಉತ್ತರಿಸಿದ್ದರು. ಆದರೆ ಈಗ ಗ್ಯಾರಂಟಿ ಯೋಜನೆ ಸರ್ಕಾರಕ್ಕೆ ಹೊಡೆತ ನೀಡುತ್ತಿದ್ದು ಕಾಂಗ್ರೆಸ್‌ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗ ಸರ್ಕಾರವೇ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ಮೀಸಲಿಟ್ಟ ಹಣವನ್ನು ಬಳಕೆಗೆ ಅಧಿಕೃತ ಅನುಮತಿ ನೀಡಿದೆ.