ಆರಂಭದ ದಿನ ಕೆಲ ಶಾಲೆಗಳಿಗೆ ಭೇಟಿ: ಬೊಮ್ಮಾಯಿ

ಬೆಂಗಳೂರು: ಶಾಲೆ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರಂಭದ ದಿನ ಬೆಂಗಳೂರಿನ ಕೆಲ ಶಾಲೆಗಳಿಗೆ ನಾನು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ನನ್ನ ಜೊತೆ ಶಿಕ್ಷಣ ಸಚಿವರೂ ಇರುತ್ತಾರೆ. ಶಾಲೆಗಳಿಗೆ ಸ್ಯಾನಿಟೈಸಿಂಗ್, ಶಿಕ್ಷಕರು, ಶಾಲಾ ಸಿಬ್ಬಂದಿಗೆ ವ್ಯಾಕ್ಸಿನ್ ಪಡೆಯುವುದು ಕಡ್ಡಾಯಗೊಳಿಸಲಾಗಿದೆ, ಪೋಷಕರ ಸಮ್ಮತಿ ಪಡೆದು ಮಕ್ಕಳು ಶಾಲೆಗೆ ಬರಬೇಕು. ಯಾವುದೇ ಆತಂಕವಿಲ್ಲದೇ ನಿಧಾನವಾಗಿ ಮಕ್ಕಳು ಶಾಲೆಗೆ ಬರಬಹುದು. ಎಲ್ಲ ಪೋಷಕರು ಸಹ ಲಸಿಕೆ ಪಡೆಯಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಂತಹಂತವಾಗಿ ಶಾಲೆ ಆರಂಭಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಸರ್ಕಾರಿ ಶಾಲೆಗಳು ಸುಧಾರಿಸಿವೆ, ದೆಹಲಿ ಮಾದರಿ ಅಳವಡಿಸಿಕೊಳ್ಳಬೇಕಿದೆ: ರಮೇಶ್ ಕುಮಾರ್

ಇಂದು ಎಚ್‍ಎಎಲ್ ವಿಮಾನ ನಿಲ್ದಾಣದ ಮೂಲಕ ಸಿಎಂ ಬಳ್ಳಾರಿಗೆ ಪ್ರವಾಸ ಕೈಗೊಂಡಿದ್ದು, ಬಳ್ಳಾರಿಯಿಂದ ರಸ್ತೆ ಮಾರ್ಗದ ಮೂಲಕ ಆಲಮಟ್ಟಿಯ ಕೃಷ್ಣ ನದಿಗೆ ಬಾಗಿನ ಅರ್ಪಿಸಲಿದ್ದಾರೆ. ಸಿಎಂ ಜೊತೆ ಸಚಿವರಾದ ಮುರುಗೇಶ್ ನಿರಾಣಿ, ಗೋವಿಂದ್ ಕಾರಜೋಳ, ಉಮೇಶ್ ಕತ್ತಿ ಸಹ ತೆರಳಿದ್ದಾರೆ. ಬಳಿಕ ಬೆಳಗಾವಿಯಲ್ಲಿ ಸಿಎಂ ಕೋವಿಡ್ ಸಭೆ ನಡೆಸಲಿದ್ದಾರೆ.

ಆಗಸ್ಟ್ 23ರಿಂದ ಶಾಲೆ ಆರಂಭಿಸುವುದಾಗಿ ಈ ಹಿಂದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದರು. ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ.

Comments

Leave a Reply

Your email address will not be published. Required fields are marked *