ಶಾಲೆಯ ಆವರಣದಲ್ಲೇ ವಿದ್ಯಾರ್ಥಿನಿಯ ರುಂಡವನ್ನು ಕತ್ತರಿಸಿದ!

ಭೋಪಾಲ್: ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಶಾಲೆಯ ಆವರಣದಲ್ಲೇ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿಯಿಂದ ರುಂಡವನ್ನು ಕತ್ತರಿಸಿ ಕೊಲೆಗೈದ ಘಟನೆ ಮಧ್ಯಪ್ರದೇಶದಲ್ಲಿ ಅನುಪ್ಪುರ್ ನಲ್ಲಿ ನಡೆದಿದೆ.

11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂಜಾ ಪನೀಕ(17) ತನ್ನ ಜೀವಶಾಸ್ತ್ರ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯಲು ಮಧ್ಯಾಹ್ನ 12.30 ರ ಸುಮಾರಿಗೆ ಶಾಲೆಯ ತರಗತಿಗೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿಯೊಬ್ಬ ಶಿಕ್ಷಕಿಯ ಎದುರಲ್ಲೇ ಕತ್ತಿಯಿಂದ ಕೊಲೆ ಮಾಡಿದ್ದಾನೆ.

63 ವರ್ಷದ ಆ ಶಿಕ್ಷಕಿಯೂ ಘಟನೆಯನ್ನು ನೋಡಿ ಆಘಾತಗೊಂಡಿದ್ದಾರೆ. ಕಣ್ಣಿಗೆ ಕನ್ನಡಕವನ್ನು ಧರಿಸಿರದ ಕಾರಣ ಕೊಲೆ ಮಾಡಿದವನನ್ನು ಗುರುತು ಹಿಡಿಯಲಾಗಲಿಲ್ಲ ಎಂದು ಶಿಕ್ಷಕಿಯೂ ಪೊಲೀಸರಿಗೆ ತಿಳಿಸಿದ್ದಾರೆ.

ಶಿಕ್ಷಕಿಯ ಪ್ರಕಾರ ಆ ವ್ಯಕ್ತಿಯು ಬಾಲಕಿಯ ಹಿಂದೆ ಓಡಿ ಬಂದು ತನ್ನ ಕೈಯಲಿದ್ದ ಕತ್ತಿಯಿಂದ ಮೂರು ಬಾರಿ ಕುತ್ತಿಗೆಗೆ ಚುಚ್ಚಿದ್ದಾನೆ. ನಂತರ ಆ ಕತ್ತಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.

ನಗರ ಪ್ರದೇಶದಿಂದ ಶಾಲೆ ಸ್ವಲ್ಪ ದೂರ ಇರುವುದರಿಂದ ಸುತ್ತ ಮುತ್ತ ಕಮ್ಮಿ ಜನರಿದ್ದರು. ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯ ಶವವನ್ನು ಮತ್ತು ಆ ಕತ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ.

ಪೊಲೀಸರು ಬಾಲಕಿಯ ಕುಟುಂಬದವರಿಗೆ ಈ ಘಟನೆಯ ಬಗ್ಗೆ ಪ್ರಶ್ನಿಸಿದಾಗ, ಬಾಲಕಿಯ ಪೋಷಕರು ತಮ್ಮ ಕುಟುಂಬದವರಿಂದಲೇ ಯಾರೋ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಆದರೆ ಪೊಲೀಸರಿಗೆ ಮತ್ತೊಂದು ಸಾವಿನ ಸುದ್ದಿಯಿಂದ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೊಲೆಯಾದ ಬಾಲಕಿಯ ಊರಿನ ಹತ್ತಿರ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ನೇಣು ಹಾಕಿಕೊಂಡ ಯುವಕನಿಗೂ ಮತ್ತು ವಿದ್ಯಾರ್ಥಿನಿಯ ಕೊಲೆ ಪ್ರಕರಣಕ್ಕೆ ಏನಾದರೂ ಸಂಬಂಧ ಇದ್ಯಾ ಎನ್ನುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *