ಮಕ್ಕಳ ಪ್ರವೇಶಾತಿಗೆ ಪೋಷಕರನ್ನ ಸೆಳೆಯಲು ಲಕ್ಕಿ ಡ್ರಾ ಆಯೋಜಿಸಿದ ಶಾಲೆ!

ಹೈದರಾಬಾದ್: ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಅಥವಾ ವಿವಿಧ ಮಳಿಗೆಗಳಲ್ಲಿ ಲಕ್ಕಿ ಡ್ರಾ ಆಯೋಜನೆ ಮಾಡೋದನ್ನ ನೋಡಿರ್ತೀರ. ಆದ್ರೆ ತೆಲಂಗಾಣದ ಹಾಯತ್ ನಗರದಲ್ಲಿ ಶಾಲೆಯೊಂದು ಪೋಷಕರನ್ನ ಸೆಳೆಯಲು ಲಕ್ಕಿ ಡ್ರಾ ಆಯೋಜಿಸಿ ಸುದ್ದಿಯಾಗಿದೆ.

ಇಲ್ಲಿನ ಪದ್ಮಾವತಿ ಕಾಲೋನಿಯಲ್ಲಿರುವ ಸರೀತಾ ವಿದ್ಯಾ ನಿಕೇತನ್ ಶಾಲೆಯು ಲಕಿ ಡ್ರಾ ನಡೆಸುತ್ತಿದೆ. ಮೊದಲ ಪ್ರವೇಶ- ಲಕ್ಕಿ ಡ್ರಾ- ಸೀಸನ್ 1 ಎಂದು ಬೋರ್ಡ್ ಹಾಕಲಾಗಿದೆ. ಮಾರ್ಚ್ 27 ರೊಳಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಶುಲ್ಕ ಪಾವತಿಸಿ ನವೀಕರಿಸಿಕೊಂಡರೆ ಲಕ್ಕಿ ಡ್ರಾ ವನ್ನು ಗೆಲ್ಲುವ ಅವಕಾಶ ಸಿಗುತ್ತದೆ ಎಂದು ಶಾಲೆಯ ನೋಟಿಸ್‍ನಲ್ಲಿ ಹಾಕಿದ್ದಾರೆ.

ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿಕೊಳ್ಳುವವರಿಗೆ ಟೋಕನ್‍ಗಳನ್ನು ನೀಡಲಾಗುತ್ತಿದೆ. ಮತ್ತು ಡ್ರಾ ಮಾರ್ಚ್ 23ರಂದು ನಡೆಯಲಿದೆ. ಪ್ರವೇಶ ಮತ್ತು ಶಾಲಾ ಶುಲ್ಕಗಳು ಲಕ್ಷಾಂತರ ರೂಪಾಯಿ ಇರುವಾಗ ಶಾಲೆಯವರು ಸಾವಿರ ರೂ ಬೆಲೆಯ ಉಡುಗೊರೆಗಳನ್ನ ಬಹುಮಾನವಾಗಿ ಇಟ್ಟು ಪೋಷಕರನ್ನ ಸೆಳೆಯುತ್ತಿದ್ದಾರೆ.

ಎಲ್‍ಕೆಜಿ ಯಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್, ರಿಮೋಟ್ ಕಂಟ್ರೋಲ್ ಕಾರ್, ಬಾರ್ಬೀ ಡಾಲ್, ಟೆಡ್ಡಿ ಬೇರ್ ಮತ್ತು ಪುಸ್ತಕವನ್ನ ಲಕ್ಕಿ ಡ್ರಾ ಬಹುಮಾನವಾಗಿ ನೀಡಲಾಗುತ್ತಿದೆ. ಹಾಗೇ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್, ಫುಟ್ಬಾಲ್, ಪುಸ್ತಕ, ಕ್ರಿಕೆಟ್ ಕಿಟ್, ಚೆಸ್ ಬೋರ್ಡ್‍ಗಳನ್ನು ಲಕ್ಕಿ ಡ್ರಾದಲ್ಲಿ ಗೆದ್ದವರಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ.

ಶಾಲೆಯ ನೋಟಿಸ್ ಬಗ್ಗೆ ಮಾತನಾಡಿದ ಪೋಷಕರು, ಲಕ್ಕಿ ಡ್ರಾ ಬಗ್ಗೆ ಇತ್ತೀಚೆಗೆ ನೋಟಿಸ್ ಹಾಕಿದ್ದಾರೆ. ಮಾರ್ಚ್ 23 ರವರೆಗೂ ಇದು ಇಲ್ಲಿರುತ್ತದೆ. ಯಾವುದೇ ಪೋಷಕರು ಇದಕ್ಕೆ ಈವರೆಗೆ ಆಕ್ಷೇಪ ವ್ಯಕ್ತಪಡಿಸಿಲ್ಲವೆಂದು ಹೇಳಿದರು.

ಆದ್ರೆ ಕೆಲವರು ಈ ಕ್ರಮವನ್ನು ಅನೈತಿಕವೆಂದು ಖಂಡಿಸಿದ್ದಾರೆ. ಮಕ್ಕಳ ಹಕ್ಕುಗಳ ಕಾರ್ಯಕರ್ತ ಅಚ್ಯುತ ರಾವ್ ಈ ಬಗ್ಗೆ ಮಾತನಾಡಿದ್ದು, “ಇದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದೆ. ಬಹುಮಾನ ಮತ್ತು ಯೋಜನೆಗಳನ್ನು ಬಳಸಿಕೊಂಡು ಪೋಷಕರು ಮತ್ತು ಮಕ್ಕಳನ್ನು ಆಕರ್ಷಿಸುವಂತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳೇ ಹೊರತು ವ್ಯವಹಾರವಲ್ಲ. ಈ ಬಗ್ಗೆ ಜಿಲ್ಲಾ ಶಿಕ್ಷಣ ಕಚೇರಿಯ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *