ನಿವೃತ್ತ ಶಿಕ್ಷಕರನ್ನು ಸಾರೋಟಿನಲ್ಲಿ ಕೂರಿಸಿ ಅದ್ಧೂರಿಯಾಗಿ ಬೀಳ್ಕೊಟ್ಟ ವಿದ್ಯಾರ್ಥಿಗಳು!

ತುಮಕೂರು: ನೆಚ್ಚಿನ ಶಿಕ್ಷಕರೊಬ್ಬರು ನಿವೃತ್ತಿಯಾಗಿದ್ದಕ್ಕೆ ವಿದ್ಯಾರ್ಥಿಗಳು, ಶಾಲೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೇರಿ ಅದ್ಧೂರಿಯಾಗಿ ಬೀಳ್ಕೊಟ್ಟಿರುವ ಅಪರೂಪದ ಕಾರ್ಯಕ್ರಮವೊಂದು ಬೆಳ್ಳಾವಿಯಲ್ಲಿ ನಡೆದಿದೆ.

ಬೆಳ್ಳಾವಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಎಸ್. ಈಶ್ವರಯ್ಯ ನಿವೃತ್ತಿಯಾಗಿದ್ದಾರೆ. ಕಳೆದ 32 ವರ್ಷಗಳಿಂದ ಇದೇ ಕಾಲೇಜಿನಲ್ಲಿ ಕಾರ್ಯನಿರ್ವಸುತ್ತಿದ್ದ ಈಶ್ವರಯ್ಯ ಅವರು ಅನೇಕ ವಿದ್ಯಾರ್ಥಿಗಳ ಅಚ್ಚು-ಮೆಚ್ಚಿನ ಶಿಕ್ಷಕರಾಗಿದ್ದರು.

 

ಈಶ್ವರಯ್ಯ ಅವರಿಗೆ ಮಕ್ಕಳಿಲ್ಲ. ಹೀಗಾಗಿ ಶಾಲೆಯ ವಿದ್ಯಾರ್ಥಿಗಳನ್ನೇ ತಮ್ಮ ಮಕ್ಕಳೆಂದು ತಿಳಿದು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಅಷ್ಟೇ ಅಲ್ಲದೇ ಊಟ, ವಸತಿ ಹೀಗೆ ಅನೇಕ ಸಹಾಯ ಮಾಡಿದ್ದಾರೆ. ನೆಚ್ಚಿನ ಶಿಕ್ಷಕರ ದಯಾಗುಣವನ್ನು ನೆನೆದ ಈಗಿನ ಮತ್ತು ಹಳೇ ವಿದ್ಯಾರ್ಥಿಗಳು ಈಶ್ವರಯ್ಯ ಅವರಿಗೆ ಪೇಟಾ ತೊಡಿಸಿ, ಸಾರೋಟಿನಲ್ಲಿ ಕೂರಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಈಶ್ವರಯ್ಯ ಅವರಿಗೆ ಜಯಘೋಷಗಳನ್ನು ಕೂಗುತ್ತ ಬೀಳ್ಕೊಟ್ಟಿದ್ದಾರೆ.

ಯಾವ ಶಿಕ್ಷಕರೇ ಆದರೂ ಮಕ್ಕಳಿಗೆ ಸರಿಯಾದ ಮಾರ್ಗ, ಸನ್ನಡೆತೆ ಕಲಿಸಬೇಕು. ಜೊತೆಗೆ ತನ್ನ ವೃತ್ತಿಗೆ ಮೋಸ ಮಾಡದೇ ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಬೆಳೆಸಿದರೆ ಶಿಕ್ಷಕರು ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂದು ಈಶ್ವರಯ್ಯ ಅವರು ಹೇಳಿದರು.

Comments

Leave a Reply

Your email address will not be published. Required fields are marked *