ಸರ್ಕಾರಿ ರಜೆ ಇದ್ದರೂ ಶಾಲಾ, ಕಾಲೇಜು ಓಪನ್!

ಬೆಂಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆ ಇದ್ದರೂ ಶಾಲೆ,ಕಾಲೇಜು ನಡೆಸಿ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಟೀಕೆ ಕೇಳಿಬಂದಿದೆ.

ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಎಂ.ಎಸ್ ರಾಮಯ್ಯ ಇನ್ಸ್ ಟ್ಯೂಟ್ ಆಫ್ ಬಿಸಿನೆಸ್ ಸ್ಟಡೀಸ್ ಕಾಲೇಜಿನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆ. ಸರ್ಕಾರಿ ಆದೇಶವನ್ನು ಕಾಲೇಜು ಧಿಕ್ಕರಿಸಿದ್ದು, ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಕಾಲೇಜಿಗೆ ಬಂದಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ಎರಡು ಖಾಸಗಿ ಕಾಲೇಜುಗಳು ಅಗೌರವ ತೋರಿ ಎಂದಿನಂತೆ ಕಾಲೇಜಿನಲ್ಲಿ ತರಗತಿಯನ್ನು ನಡೆಸಿದೆ. ಕೆ.ಆರ್.ಪೇಟೆ ಪಟ್ಟಣದ ಕ್ರೈಸ್ಟ್ ಕಿಂಗ್ ಹಾಗೂ ಸ್ಕಾಲರ್ಸ್ ಪಿಯು ಕಾಲೇಜುಗಳು ಇಂದು ಓಪನ್ ಆಗಿದೆ. ಸರ್ಕಾರದ ಆದೇಶ ಧಿಕ್ಕರಿಸಿ ಎಂದಿನಂತೆ ತರಗತಿ ನಡೆಸುತ್ತಿದ್ದು, ಶ್ರೀಗಳ ಅನುಯಾಯಿಗಳು ಪ್ರಶ್ನಿಸಿದ್ದಕ್ಕೆ, ಕಾಲೇಜಿಗೆ ನೂರರಷ್ಟು ಫಲಿತಾಂಶ ತರಬೇಕೆಂದು ಕ್ಲಾಸ್ ನಡೆಸುತ್ತಿದ್ದೇವೆ ಎಂಬ ಉತ್ತರ ನೀಡಿದ್ದಾರೆ. ಕಾಲೇಜು ಸಿಬ್ಬಂದಿಯ ಈ ವರ್ತನೆಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಯಚೂರಿನ ಎಎಂಇ ಸೊಸೈಟಿಯ ವಿಎಸ್‍ಸಿ ಫಾರ್ಮರ್ಸಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದೆ. 3ನೇ ಸೆಮಿಸ್ಟರ್ ಫಾರ್ಮಸಿಟಿಕಲ್ ಎಂಜಿನಿಯರಿಂಗ್ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ರಜೆಯ ಬಗ್ಗೆ ನಮಗೆ ಮಾಹಿತಿಯಿಲ್ಲ, ದೂರದ ಊರಿನಿಂದ ಬಂದಿದ್ದೇನೆ ಪರೀಕ್ಷೆ ನಡೆಸುತ್ತಿದ್ದೇನೆ ಎಂದಿದ್ದಾರೆ. ಕಾಲೇಜು ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೇ ನೀಡದೇ ಜಾರಿಕೊಳ್ಳುವ ಪ್ರಯತ್ನ ಮಾಡಿದೆ.

ಬೀದರ್ ನ ಬಸವನಗರದಲ್ಲಿರುವ ದತ್ತಗಿರಿ ಮಹಾರಾಜ್ ಪಬ್ಲಿಕ್ ಸ್ಕೂಲ್ ನಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಿಬಿಎಸ್‍ಸಿ ಪೂರಕ ಪರೀಕ್ಷೆ ನಡೆಸಿದೆ. ಬೆಳಗ್ಗೆ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಶಾಲೆಯ ಮೂರನೇ ಮಹಡಿಯಲ್ಲಿ ವಿಜ್ಞಾನ ಪರೀಕ್ಷೆ ನಡೆಸಲಾಗಿದೆ. ವಿಷಯ ತಿಳಿದು ಶಾಲೆಗೆ ಪಬ್ಲಿಕ್ ಟಿವಿ ಭೇಟಿ ನೀಡಿದ ಕ್ಯಾಮೆರಾ ನೋಡಿ ಆಡಳಿತ ಮಂಡಳಿಯ ಸದಸ್ಯರು ಕೆಲ ಸಮಯ ಕಕ್ಕಾಬಿಕ್ಕಿಯಾದರು. ಈ ಬಗ್ಗೆ ಪ್ರಿನ್ಸಿಪಾಲ್ ಬಳಿ ಪ್ರಶ್ನಿಸಿದರೆ, ಪರೀಕ್ಷೆ ನಡೆದಿದೆ ಈಗ ಏನು ಮಾಡುವುದು ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *