ಆನ್‌ಲೈನ್ ಜಾಬ್ ಹೆಸ್ರಲ್ಲಿ ವಂಚನೆ – 1.69 ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

ದಾವಣಗೆರೆ: ಮೋಸ ಹೋಗುವವರು ಇರೋ ವರೆಗೂ ಮೋಸ ಮಾಡುವವರು ಇದ್ದೇ ಇರ್ತಾರೆ. ಅದರಲ್ಲೂ ಈಗ ಆನ್‌ಲೈನ್‌ನಲ್ಲೇ ಮೋಸಗಳು (Online Fraud) ಹೆಚ್ಚಾಗಿದ್ದು, ಎಷ್ಟೇ ಓದಿಕೊಂಡಿದ್ದರೂ ಕೂಡ ಜನರು ಯಾಮಾರುವುದು ಜಾಸ್ತಿ. ಹಾಗೇಯೇ ಇಲ್ಲೊಬ್ಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಬಂದ ಜಾಬ್ ಮೆಸೇಜ್ ನಂಬಿ 1.69 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಜಗಳೂರು ತಾಲೂಕಿನ ನಿವಾಸಿ ಪ್ರದೀಪ್ ಕುಮಾರ್ ಹೆಚ್‌ಎಂ ಹಣ ಕಳೆದುಕೊಂಡ ವ್ಯಕ್ತಿ. ಪ್ರದೀಪ್ ಕುಮಾರ್ ಫೇಸ್‌ಬುಕ್‌ನಲ್ಲಿ ಉದ್ಯೋಗಕ್ಕೆ ಸಂಪರ್ಕಿಸಿ ಎಂಬ ಸಂದೇಶದೊಂದಿಗೆ ಮೊಬೈಲ್ ನಂಬರ್ ನೋಡಿದ್ದ. ಅದಕ್ಕೆ ಮೆಸೇಜ್ ಮಾಡಿದಾಗ ಮನೆಯಲ್ಲೇ ಕೆಲಸ ಎಂದು ಅಪರಿಚಿತ ವ್ಯಕ್ತಿಯಿಂದ ವಾಟ್ಸಪ್ ಮೂಲಕ ಒಂದು ಲಿಂಕ್ ಬಂದಿದೆ. ಪ್ರದೀಪ್ ಕುಮಾರ್ ಆ ಲಿಂಕ್ ಅನ್ನು ತೆರೆದಾಗ ಪ್ರಾಡಕ್ಟ್‌ಗಳನ್ನು ಖರೀದಿಸಿದರೆ ಕಮಿಷನ್ ನೀಡುವುದಾಗಿ ಆಮಿಷ ತೋರಿಸಿದ್ದಾರೆ.

ಇದನ್ನು ನಂಬಿದ ಪ್ರದೀಪ್ ಕಳುಹಿಸಿದ ಲಿಂಕ್‌ನಿಂದ ಅಕೌಂಟ್ ಓಪನ್ ಮಾಡಿದ್ದಾನೆ. ಅಪರಿಚಿತ ಹೇಳಿದ ನಂಬರ್‌ಗೆ 300 ರೂ. ಕಳುಹಿಸಿದಾಗ ವಾಪಸ್ 638 ರೂ. ಬಂದಿದೆ. ಇದೇ ರೀತಿ ಪ್ರದೀಪ್ ವಿವಿಧ ಹಂತಗಳಲ್ಲಿ 1.09 ಲಕ್ಷ ರೂ. ಆತನ ಅಕೌಂಟ್‌ನಿಂದ ಹಾಗೂ ಪತ್ನಿಯ ಅಕೌಂಟ್‌ನಿಂದ 60 ಸಾವಿರ ರೂ. ಕಳುಹಿಸಿದ್ದಾನೆ. ನಂತರ ಯಾವುದೇ ಕಮಿಷನ್ ಬಾರದಿದ್ದಾಗ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಬಿಲ್ ಕೇಳಲು ಬಂದ ಲೈನ್‍ಮೆನ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿ ಅರೆಸ್ಟ್

ಈ ಬಗ್ಗೆ ಪ್ರದೀಪ್ ಸಿಐಎನ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಯಾವುದೇ ಕಮಿಷನ್ ಆಸೆಗೆ ಇಲ್ಲವೇ ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ನಂಬಿಸಿ ಮೋಸ ಮಾಡುವ ಜಾಲದಿಂದ ಎಚ್ಚರಿಕೆಯಿಂದ ಇರಿ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಜನರು ಮಾತ್ರ ದುಪ್ಪಟ್ಟು ಹಣದ ಆಸೆಗೆ ಬಿದ್ದು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಶುರುವಾಯ್ತು ಬಿಜೆಪಿ ಕಾಲದ ಅಕ್ರಮದ ತನಿಖೆ – ಮೊದಲ ಎಫ್‌ಐಆರ್‌ ದಾಖಲು