ಮಹಿಳೆಯರಿಗೂ ಮುಕ್ತವಾಗುತ್ತಾ ಶಬರಿಮಲೈಯ ಅಯ್ಯಪ್ಪನ ಬಾಗಿಲು..?

ನವದೆಹಲಿ: ಕಳೆದ 3 ದಿನಗಳಿಂದ ಸಾಲು ಸಾಲು ಮಹತ್ವದ ತೀರ್ಪುಗಳನ್ನು ನೀಡುತ್ತಿರುವ ಸುಪ್ರೀಂಕೋರ್ಟ್ ಇಂದು ಮತ್ತೊಂದು ಐತಿಹಾಸಿಕ ತೀರ್ಪು ನೀಡಲಿದೆ. ಕೇರಳದ ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆರಿಗೂ ಪ್ರವೇಶ ನೀಡುವ ಸಂಬಂಧ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಲಿದೆ. ಮಹಿಳೆಯರ ಪ್ರವೇಶ ಮಾತ್ರವಲ್ಲದೆ ತಿಂಗಳ ಋತುಮತಿಯಾದ ಮಹಿಳೆಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇದೆಯೋ ಇಲ್ವೋ ಅಂತ ತೀರ್ಪು ನೀಡಲಿದೆ.

ಪ್ರಸಿದ್ದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ 800 ವರ್ಷಗಳ ಹಿಂದಿನ ನಿಯಮವನ್ನು ಪ್ರಶ್ನಿಸಿ, ಯಂಗ್ ಲಾಯರ್ಸ್ ಅಸೋಸಿಯೇಷನ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಮಹಿಳೆಯರಿಗೆ ನಿಷೇಧ ಹೇರಿರುವುದು ಸಂಪ್ರದಾಯ ಅಥವಾ ಹಿಂದೂ ಧರ್ಮದ ನಿಯಮ ಪಾಲನೆ ಅಲ್ಲ ಅಂತ ವಾದ ಮಂಡಿಸಿತ್ತು. ಅಲ್ಲದೆ ಮುಟ್ಟಾದ ಹೆಣ್ಣುಮಕ್ಕಳ ದೇವಸ್ಥಾನ ಪ್ರವೇಶ ನಿರಾಕರಣೆಯನ್ನೂ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ಆಲಿಸಿದ್ದ ಸುಪ್ರೀಂಕೋರ್ಟ್, ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿತ್ತು.

ಪ್ರಕರಣ ವಿಚಾರಣೆ ವೇಳೆ ಮುಟ್ಟಾದ ಮಹಿಳೆಯರು ಅಪವಿತ್ರಳು ಹಾಗಾಗಿ ಅವರಿಗೆ ಪ್ರವೇಶ ನಿರ್ಬಂಧಿಸಿಲಾಗಿದೆ ಅಂತಾ ದೇವಸ್ಥಾನ ಆಡಳಿತ ಮಂಡಳಿ ಮಂಡಿಸಿದ ವಾದಕ್ಕೆ ಸಾಂವಿಧಾನಿಕಪೀಠ ಅಸಮಾಧಾನ ವ್ಯಕ್ತಪಡಿಸಿತ್ತು. ಯಾವ ಆಧಾರದ ಮೇಲೆ ಎಲ್ಲವನ್ನೂ ನಿರ್ಧರಿಸಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಿರಿ ಅಂತಾ ಚಾಟಿ ಬೀಸಿತ್ತು. ಮಹಿಳೆಯರಿಗೂ ಪುರುಷರಷ್ಟೆ ಸಮಾನ ಹಕ್ಕಿದೆ. ಅದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದಡಿ ಮಹಿಳೆಯರಿಗೂ ಮುಕ್ತ ಅವಕಾಶ ನೀಡಬೇಕು ಅಂತ ಅಭಿಪ್ರಾಯಪಟ್ಟಿತ್ತು.

ಬಳಿಕ ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾ. ದೀಪಕ್ ಮಿಶ್ರಾ, ನ್ಯಾ.ರೋಹಿಂಗ್ಟನ್, ನ್ಯಾ. ಖಾನ್ವೀಲ್ಕರ್, ನ್ಯಾ.ಡಿ.ವೈ ಚಂದ್ರಚೂಡ್, ನ್ಯಾ.ಇಂಧು ಮಲ್ಹೋತ್ರಾ ನೇತೃತ್ವದ ಪಂಚಪೀಠ ಇಂದು ತೀರ್ಪು ನೀಡಲಿದೆ. ಹಾಗಾದರೆ ಶಬರಿಮಲೈಗೆ ಇನ್ಮುಂದೆ ಮಹಿಳೆಯರಿಗೂ ಪ್ರವೇಶ ಸಿಗುತ್ತಾ..? ಅಥವಾ ಹಳೆಯ ಸಂಪ್ರದಾಯವೇ ಮುಂದುವರಿಯುತ್ತಾ..? ಕಾದುನೋಡ್ಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *