ಸುಪ್ರೀಂನಲ್ಲಿಂದು ಬಿಎಸ್‌ವೈ ಆಡಿಯೋ ವಿಚಾರಣೆ – ಅನರ್ಹ ಶಾಸಕರು ಫುಲ್ ಟೆನ್ಷನ್

ನವದೆಹಲಿ: ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದ ಅನರ್ಹ ಶಾಸಕರು ಮತ್ತೆ ತೊಂದರೆಯಲ್ಲಿ ಸಿಲುಕಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಆಡಿಯೋ ಯಾವಾಗ ಸಂಕಷ್ಟ ತರತ್ತೊ ಎಂಬ ಆತಂಕದಲ್ಲಿದ್ದಾರೆ.

ಸೋಮವಾರ ಸುಪ್ರೀಂಕೋರ್ಟ್ ಕದ ತಟ್ಟಿರುವ ಕಾಂಗ್ರೆಸ್, ಸಿಎಂ ಯಡಿಯೂರಪ್ಪರ ಆಡಿಯೋವನ್ನು ಪರಿಗಣಿಗಣಿಸಿ ಮತ್ತೆ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು. ಮನವಿ ಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈಗಾಗಲೇ ವಿಡಿಯೋ ತುಣುಕು ಮತ್ತು ಅದರಲ್ಲಿನ ಸಂಭಾಷಣೆಯನ್ನು ಭಾಷಾಂತರ ಮಾಡಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿದೆ. ಈ ಅಂಶಗಳನ್ನು ನ್ಯಾ.ಎನ್.ವಿ.ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಸಮ್ಮುಖದ ಪೀಠ ಪರಿಶೀಲನೆ ಮಾಡಲಿದೆ.

ಕಾಂಗ್ರೆಸ್ ತನ್ನ ವಾದ ಮಂಡಿಸಿದ ಬಳಿಕ ಮೂವರು ನ್ಯಾಯಾಧೀಶರು ತಮ್ಮೊಳಗೆ ಚರ್ಚೆ ಮಾಡಿ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಿದಲ್ಲಿ ಅನರ್ಹರ ತೀರ್ಪು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಒಂದು ವೇಳೆ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸದಿದ್ದಲ್ಲಿ ಮುಂದಿನ ಒಂದೆರಡು ದಿನದಲ್ಲಿ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಹೀಗಾಗಿ ಇಂದು ನಡೆಯಲಿರುವ ವಿಚಾರಣೆ ಇಡೀ ಪ್ರಕರಣದ ದಿಕ್ಕನ್ನು ಬದಲಿಸುವ ಶಕ್ತಿ ಹೊಂದಿದ್ದು ಅನರ್ಹ ಶಾಸಕರಿಗೆ ಟೆನ್ಷನ್ ಶುರುವಾಗಿದೆ. ಕೆಲವು ಶಾಸಕರು ದೆಹಲಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ತಮ್ಮ ವಕೀಲರನ್ನು ಸಂಪರ್ಕಿಸಿ ಮುಂದೇನು ಅನ್ನೊ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *