ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ

– ಖಾತೆಗಳಲ್ಲಿ ಕನಿಷ್ಠ ಬಾಕಿ ಉಳಿಸಿಕೊಳ್ಳದಿದ್ದರೆ ದಂಡ

ನವದೆಹಲಿ: ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರು ಇಂದಿನಿಂದ ತಮ್ಮ ಖಾತೆಯಲ್ಲಿ ಕನಿಷ್ಠ ಬಾಕಿ ಉಳಿಸಿಕೊಳ್ಳದಿದ್ದರೆ ದಂಡ ಕಟ್ಟಬೇಕಾಗುತ್ತದೆ.

ಮೆಟ್ರೋ ನಗರಗಳಲ್ಲಿರುವ ಶಾಖೆಗಳ ಎಸ್‍ಬಿಐ ಖಾತೆದಾರರು ತಿಂಗಳಿಗೆ ಕನಿಷ್ಠ 5 ಸಾವಿರ ರೂ. ಬ್ಯಾಲೆನ್ಸ್ ಹೊಂದಿರಬೇಕು. ಕನಿಷ್ಠ ಬಾಕಿ ಉಳಿಸಿಕೊಂಡಿಲ್ಲವಾದ್ರೆ 50 ರಿಂದ 100 ರೂ. ದಂಡ ಕಟ್ಟಬೇಕು. ಇನ್ನು ನಗರ ಪ್ರದೇಶಗಳ ಶಾಖೆಗಳಲ್ಲಿ ಖಾತೆ ಹೊಂದಿರುವವರು 3 ಸಾವಿರ ರೂ., ಅರೆನಗರ ಪ್ರದೇಶಗಳ ಖಾತೆದಾರರು 2 ಸಾವಿರ ರೂ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಖಾತೆದಾರರು 1 ಸಾವಿರ ರೂ. ಕನಿಷ್ಠ ಬಾಕಿ ಉಳಿಸಿಕೊಂಡಿರಬೇಕು. ಈ ನಿಯಮ ಉಲ್ಲಂಘಿಸಿದ್ರೆ 20 ರಿಂದ 50 ರೂ.ವರೆಗೆ ದಂಡ ತೆರಬೇಕು.

ಎಟಿಎಂ ವಿತ್‍ಡ್ರಾವಲ್‍ಗೂ ನಿಯಮ: ಇನ್ಮುಂದೆ ಎಸ್‍ಬಿಐ ಖಾತೆದಾರರು ಎಟಿಎಂಗಳಿಂದ ಹೆಚ್ಚು ಬಾರಿ ಹಣ ವಿತ್‍ಡ್ರಾ ಮಾಡಿದ್ರೂ ಶುಲ್ಕ ತೆರಬೇಕು. ಇತರೆ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಎಸ್‍ಬಿಐ ಖಾತೆದಾರರು ತಿಂಗಳಿಗೆ 3ಕ್ಕಿಂತ ಹೆಚ್ಚು ಬಾರಿ ಹಣ ವಿತ್‍ಡ್ರಾ ಮಾಡಿದ್ರೆ 20 ರೂ.ವರೆಗೆ ಶುಲ್ಕ ತೆರಬೇಕು. ಹಾಗೂ ಎಸ್‍ಬಿಐ ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿದ್ರೆ 10 ರೂ. ಶುಲ್ಕ ಕಟ್ಟಬೇಕು. ಒಂದು ವೇಳೆ ಖಾತೆಯಲ್ಲಿ ಡ್ರಾ ಮಾಡಿದ ಬಳಿಕವೂ 25 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಇದ್ದರೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಹಾಗೆಯೇ ಬೇರೆ ಬ್ಯಾಂಕ್‍ಗಳ ಎಟಿಎಂನಲ್ಲಿ ಡ್ರಾ ಮಾಡಿದ ಬಳಿಕವೂ ಖಾತೆಯಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಹಣ ಇದ್ದರೆ ಶುಲ್ಕ ಕಟ್ಟಬೇಕಿಲ್ಲ. ಈ ಎಲ್ಲಾ ನಿಯಮಗಳು ಇಂದಿನಿಂದಲೇ ಜಾರಿಯಾಗಲಿದೆ.

ಈ ಹೊಸ ನಿಯಮಗಳನ್ನ ಜಾರಿಗೆ ತಂದಿರುವುದನ್ನ ಎಸ್‍ಬಿಐ ಬ್ಯಾಂಕ್ ಸಮರ್ಥಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ್‍ಧನ್ ಖಾತೆಗಳು ಇರೋದ್ರಿಂದ ಅದನ್ನು ನಿರ್ವಹಿಸುವ ಸಲುವಾಗಿ ಕೆಲವೊಂದಿಷ್ಟು ಶುಲ್ಕ ವಿಧಿಸುವುದು ಅನಿವಾರ್ಯ ಎಂದು ಹೇಳಿದೆ.

ಇವತ್ತು ನಮ್ಮ ಬಳಿ 11 ಕೋಟಿಯಷ್ಟು ಜನ್‍ಧನ್ ಖಾತೆಗಳಿವೆ. ಇಷ್ಟು ಹೆಚ್ಚಿನ ಸಂಖ್ಯೆಯ ಖಾತೆಗಳನ್ನ ನಿರ್ವಹಣೆ ಮಾಡಲು ಈ ಶುಲ್ಕ ಅಗತ್ಯ. ಹಲವಾರು ಅಂಶಗಳನ್ನ ಪರಿಗಣಿಸಿ, ಸೂಕ್ಷ್ಮವಾಗಿ ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಹಿಂದೆಯೂ ದಂಡ ವಿಧಿಸಲಾಗುತ್ತಿತ್ತು. ಆದರೆ 2012ರಲ್ಲಿ ಅದನ್ನು ಹಿಂಪಡೆದ ಏಕೈಕ ಬ್ಯಾಂಕ್ ಎಸ್‍ಬಿಐ ಆಗಿತ್ತು ಎಂದು ಎಸ್‍ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

ಇಂದಿನಿಂದ ಎಸ್‍ಬಿಐಗೆ ಸಹವರ್ತಿ ಬ್ಯಾಂಕ್‍ಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ್ ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ವಿಲೀನವಾಗಿದೆ.

Comments

Leave a Reply

Your email address will not be published. Required fields are marked *