ಎಸ್‍ಬಿಐ ಮಿನಿಮಮ್ ಬ್ಯಾಲೆನ್ಸ್ ಮೊತ್ತ ಇಳಿಕೆ: ಯಾವ ಪ್ರದೇಶದಲ್ಲಿ ಎಷ್ಟು?

ಮುಂಬೈ: ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ಉಳಿತಾಯ ಖಾತೆಯಲ್ಲಿಡಬೇಕಾದ ಕನಿಷ್ಟ ಠೇವಣಿಯ ಮೊತ್ತವನ್ನು ಸಡಿಲಿಸಿದೆ. ಸೋಮವಾರ ಎಸ್‍ಬಿಐ ಹೇಳಿಕೆಯನ್ನು ಬಿಡುಗಡೆ ಮಾಡಿ ಬ್ಯಾಲೆನ್ಸ್ ಮೊತ್ತವನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದೆ. ಹೊಸ ಬದಲಾವಣೆ ಆಕ್ಟೋಬರ್ ನಿಂದ ಜಾರಿಗೆ ಬರಲಿದೆ.

ಯಾವ ಪ್ರದೇಶದಲ್ಲಿ ಎಷ್ಟು?
ಈ ಹಿಂದೆ ಮೆಟ್ರೋ ಪ್ರದೇಶದಲ್ಲಿ ತಿಂಗಳಿಗೆ 5 ಸಾವಿರ ರೂ. ಮಿನಿಮಮ್ ಹಣವನ್ನು ಇಡಬೇಕಿತ್ತು. ಆದರೆ ಈಗ 3 ಸಾವಿರ ರೂ. ಮಿನಿಮಮ್ ಬ್ಯಾಲೆನ್ಸ್ ಇಡಬಹುದು ಎಂದು ಹೇಳಿದೆ.

ನಗರ ಪ್ರದೇಶ, ಅರೆ ನಗರ, ಗ್ರಾಮೀಣ ಪ್ರದೇಶದಲ್ಲಿ ಅನುಕ್ರಮವಾಗಿ ಉಳಿತಾಯ ಖಾತೆಯಲ್ಲಿ 3 ಸಾವಿರ ರೂ., 2 ಸಾವಿರ ರೂ., 1 ಸಾವಿರ ರೂ. ಇಡಬೇಕಿತ್ತು. ಈ ವಿಭಾಗದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಈ ಹಿಂದೆ ಕನಿಷ್ಠ ಬ್ಯಾಲೆನ್ಸ್ ಇರದೇ ಇದ್ದರೆ ಮೆಟ್ರೋ ಪ್ರದೇಶದಲ್ಲಿ 50 ರೂ. ನಿಂದ 100 ರೂ. ವರೆಗೆ ದಂಡ ಮತ್ತು 18 ರೂ. ಜಿಎಸ್‍ಟಿ ತೆರಿಗೆ ಹಾಕಲಾಗುತಿತ್ತು. ಆದರೆ ಈಗ 30 ರೂ. ನಿಂದ 50 ರೂ. ವರೆಗೆ ದಂಡ ಹಾಕಬಹುದಾಗಿದೆ.

ಈ ಹಿಂದೆ ನಗರ ಪ್ರದೇಶದಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರದೇ ಇದ್ದರೆ 40 ರೂ. -80 ರೂ. ದಂಡ ವಿಧಿಸಲಾಗುತಿತ್ತು. ಆದರೆ ಈಗ ಈ ಮೊತ್ತವನ್ನು 30 ರೂ. -50 ರೂ.ಗೆ ಇಳಿಸಲಾಗಿದೆ.

ಈ ಹಿಂದೆ ಅರೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ 25 ರೂ. ನಿಂದ ಆರಂಭವಾಗಿ 75 ರೂ. ವರೆಗೆ ದಂಡದ ಶುಲ್ಕ ಇತ್ತು. ಈಗ 20 ರೂ. – 40 ರೂ.ಗೆ ಇಳಿಕೆಯಾಗಿದೆ.

ಎಸ್‍ಬಿಐಯಲ್ಲಿ 42 ಕೋಟಿ ಉಳಿತಾಯ ಖಾತೆ ಓಪನ್ ಆಗಿದ್ದು, ಇದರಲ್ಲಿ 13 ಕೋಟಿ ಜನ್ ಧನ್ ಖಾತೆಗಳಿವೆ. ಈ ಖಾತೆಗಳಿಗೆ ಯಾವುದೇ ದಂಡ ಇರುವುದಿಲ್ಲ ಎಂದು ಎಸ್‍ಬಿಐ ಹೇಳಿದೆ. ಏಪ್ರಿಲ್ 1ರಂದು ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು ಏರಿಸಿದ್ದಕ್ಕೆ ಭಾರೀ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್‍ಬಿಐ ಈಗ ಠೇವಣಿಯ ಮೊತ್ತವನ್ನು ಸಡಿಲಿಸಿದೆ.

Comments

Leave a Reply

Your email address will not be published. Required fields are marked *