ಸಚಿವರ ಕಾರಿನ ಕೆಂಪು ದೀಪ ನಿಷೇಧವಾಗಿದೆ – ಸಹೋದರನಿಗೆ ಟಾಂಗ್ ಕೊಟ್ಟ ಸತೀಶ್ ಜಾರಕಿಹೊಳಿ

ಬೆಳಗಾವಿ: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕೆಂಪುಗೂಟದ ಕಾರುಗಳಲ್ಲಿ ಓಡಾಡುತ್ತಿರುವವರು ಮಾಜಿ ಆಗಲಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕುಟುಕಿರುವ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, ಸಚಿವರ ಕಾರಿನ ಕೆಂಪು ದೀಪ ನಿಷೇಧವಾಗಿದೆ. ಅವರಿಗೆ ಗೊತ್ತಿಲ್ಲ ಅನ್ನಿಸುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಬಿಜೆಪಿ ಹೆಚ್ಚಿನ ಸ್ಥಾನಗಳಿಸಿದರೆ ಖಂಡಿತ ಸರ್ಕಾರ ಅಸ್ಥಿರಗೊಳಿಸಲು ಕೈ ಹಾಕುತ್ತದೆ. ಅಲ್ಲದೇ 2014 ರಲ್ಲಿ ಬಂದ ಸಂಖ್ಯಾಬಲ ಬಂದರೂ ಈ ಪ್ರಯತ್ನ ನಡೆಯುತ್ತದೆ ಎಂದರು. ಇದೇ ವೇಳೆ ಸಹೋದರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ರಮೇಶ್ ಜಾರಕಿಹೊಳಿ ಅವರಿಗೆ ಕೆಂಪು ಗೂಟದ ಕಾರು ಮತ್ತು ಸರ್ಕಾರ ಬಗ್ಗೆ ಏನೂ ಐಡಿಯಾ ಇರಲ್ಲ. ಕೆಂಪು ದೀಪ ನಿಷೇಧವಾಗಿರುವುದು ಅವರಿಗೆ ಗೊತ್ತಿಲ್ಲ ಅನಿಸುತ್ತೆ,. ಏನು ಗೊತ್ತಿಲ್ಲದೆ ಮಾತನಾಡುತ್ತಾರೆ. ಅಧಿಕಾರ ಇದ್ದರೆ ಹಾಲಿ, ಇಲ್ಲವಾದರೆ ಅಧಿಕಾರ ಹೋದವರು ಮಾಜಿ ಆಗುತ್ತಾರೆ. ಅವರ ಆಸೆ ಮೇ 23 ನಂತರ ಆದರು ಬಂದರೇ ಬರಲಿ ನೋಡೋಣ ಎಂದರು.

ಮೈತ್ರಿ ಪಾಲನೆ ಆಗಿಲ್ಲ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ಅಲ್ಲಲ್ಲಿ ಈ ಬಗ್ಗೆ ಅಸಮಾಧಾನ ಇರುವುದು ನಿಜ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವದಿಲ್ಲ ಎಂದರು. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಎಲ್ಲಾ ರಾಜ್ಯದಲ್ಲೂ ಆಪರೇಷನ್ ಕಮಲ ಮಾಡುತ್ತಿದ್ದಾರೆ. ಇರುವ ಸರ್ಕಾರವನ್ನ ಅಸ್ಥಿರ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮೋದಿ ನಡೆ ಸರಿಯಲ್ಲ. ಆದರೆ ಮೋದಿ ಕಾಲದಲ್ಲಿ ಇದು ಸಾಮಾನ್ಯವಾಗಿದೆ ಎಂದರು.

ರಾಜ್ಯಕ್ಕೆ ಕೃಷ್ಣಾ ನದಿ ನೀರು ಬಿಡಿಸಿಕೊಳ್ಳುವ ಬಗ್ಗೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಇಂದು ಅಥವಾ ನಾಳೆ ನೀರು ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು. ಇದೇ ವೇಳೆ ತಮ್ಮ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಯಾವುದೇ ರೀತಿಯಲ್ಲಿ ಅಸಮಾಧಾನ ಇಲ್ಲ. ನಾನು ಯಾವುದೇ ಹೇಳಿಕೆ ನೀಡಿಲ್ಲ ಎಂಬುವುದು ಅವರಿಗೂ ಅರಿವಿಗೆ ಬಂದಿದೆ. ಒಟ್ಟಾಗಿ ಎಲ್ಲರೂ ಕುಂದಗೋಳ ಉಪ ಚುನಾವಣೆ ಎದುರಿಸುತ್ತೇವೆ ಎಂದರು.

Comments

Leave a Reply

Your email address will not be published. Required fields are marked *