ಕಾಂಗ್ರೆಸ್‍ನಲ್ಲೇ ಇರೋದಾಗಿ ರಮೇಶ್ ಜಾರಕಿಹೊಳಿ ಬರೆದುಕೊಟ್ಟಿದ್ದಾರೆ: ಸತೀಶ್ ಜಾರಕಿಹೊಳಿ

ದಾವಣಗೆರೆ: ಮೋಡ ಇದ್ದಾಗ ಗುಡುಗು ಸಾಮಾನ್ಯ. ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದು ಬರೆದುಕೊಟ್ಟಿದ್ದಾರೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 20 ಶಾಸಕರು ದೂರ ಇಲ್ಲಾ, ಎಲ್ಲರೂ ಒಟ್ಟಿಗೆ ಇದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಅವರು ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲಾ. ಅವರು ಬಂದ ಮೇಲೆ ಅಸಮಾಧಾನದ ಕುರಿತು ಚರ್ಚೆ ಮಾಡುತ್ತೇನೆ. ಅಲ್ಲದೇ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲೇ ಇರುತ್ತೇವೆ ಎಂದು ಬರೆದುಕೊಟ್ಟಿದ್ದಾರೆ ಎಂದರು ತಿಳಿಸಿದರು.

ಸಿಎಂ ಆಗೋ ಆಸೆ: ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ #MyCMSatish Jarkiholi ಅಭಿಯಾನದ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಮುಖ್ಯಮಂತ್ರಿ ಆಗುವುದಕ್ಕೆ ಯಾರಿಗೆ ಆಸೆ ಇರುವುದಿಲ್ಲ. ಗ್ರಾಮ ಪಂಚಾಯತಿ ಸದಸ್ಯನಿಂದ ಹಿಡಿದು ಎಲ್ಲರಿಗೂ ಆಸೆ ಇರುತ್ತೆ. ಅದೇ ರೀತಿ ನಮಗೂ ಇದೆ, ಅದಕ್ಕೆ ಇನ್ನು ಸಮಯವಿದೆ ಎಂದು ಸಿಎಂ ಆಗುವ ಕನಸನ್ನು ಬಿಚ್ಚಿಟ್ಟರು.

ನಮ್ಮ ಸಮುದಾಯದವರು ಸಿಎಂ ಆಗಬೇಕೆನ್ನುವುದು ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸದ್ಯ ಸಮ್ಮಿಶ್ರ ಸರ್ಕಾರ ರಚನೆ ಆಗಿರುವುದರಿಂದ ಕೆಲ ಸಮಸ್ಯೆ ಇದ್ದೇ ಇದೆ. ನಿರಂತರವಾಗಿ ಇಂತಹ ಸಮಸ್ಯೆಗಳು ಬರುತ್ತದೆ. ಅದನ್ನು ಸಿಎಂ ಎಚ್‍ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿಭಾಯಿಸುತ್ತಾರೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ತಿಂಗಳ 8 ಮತ್ತು 9 ಕ್ಕೆ ರಾಜನಹಳ್ಳಿ ವಾಲ್ಮೀಕಿ ಮಠದ ಜಾತ್ರೆ ನಡೆಯಲಿದ್ದು, ಈ ಕಾರಣ ಜಾತ್ರೆಯ ಸ್ಥಳ ಪರಿಶೀಲನೆ ನಡೆಸಲು ಸಚಿವರು ಆಗಮಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *