ಸಾರ್ವಜನಿಕರಲ್ಲಿ ವಿನಂತಿ: ಟೀಸರ್ ಸೃಷ್ಟಿಸಿದ ಸೌಂಡು ಸೂಪರ್!

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಯುವ ಮನಸುಗಳ ಆಗಮನವಾಗಿ ಹೊಸ ಆಲೋಚನೆಗಳ ಹರಿವು ಶುರುವಾಗಿದೆ. ಈ ಕಾರಣದಿಂದಲೇ ಭಿನ್ನವಾದ ಒಂದಷ್ಟು ಚಿತ್ರಗಳು ಪ್ರೇಕ್ಷಕರ ಮುಂದೆ ಅನಾವರಣಗೊಳ್ಳುತ್ತಿವೆ. ಈ ಸಾಲಿನಲ್ಲಿ ದಾಖಲಾಗುತ್ತಲೇ ಗೆಲುವಿನ ಛಾಪು ಮೂಡಿಸಬಲ್ಲ ಚಿತ್ರವೊಂದರ ಟೀಸರ್ ಈಗ ಪ್ರೇಕ್ಷಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಂಥಾದ್ದೊಂದು ಟೀಸರ್ ಹವಾ ಸೃಷ್ಟಿಸಿರೋ ಸಿನಿಮಾ ‘ಸಾರ್ವಜನಿಕರಲ್ಲಿ ವಿನಂತಿ’!

ಇದು ಹೊಸಬರೇ ಸೇರಿಕೊಂಡು ಮಾಡಿರೋ ಚಿತ್ರ. ಕೃಪಾ ಸಾಗರ್ ಕಮರ್ಶಿಯಲ್ ವೇನಲ್ಲಿಯೇ ಸಾಮಾಜಿಕ ಸಂದೇಶ ಇರುವ ಕಥೆಯೊಂದನ್ನು ಈ ಸಿನಿಮಾ ಮೂಲಕ ಹೇಳಲು ಮುಂದಾಗಿದ್ದಾರಂತೆ. ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಟೀಸರ್ ಮಾತ್ರ ತುಂಬು ಭರವಸೆ ಹುಟ್ಟಿಸುವಂತಿದೆ. ಸೂಕ್ಷ್ಮವಂತಿಕೆಯ ಮನಸುಗಳಿಗೆಲ್ಲ ಗತ ಕಾಲದ ಪರಿಮಳವನ್ನು ಪರಿಚಯಿಸುತ್ತಲೇ ಆರಂಭವಾಗೋ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಜಾನರಿನದ್ದೆಂಬ ಹೊಳಹೂ ಸಿಕ್ಕಿದೆ. ಇದಲ್ಲದೆ ಇಡೀ ಚಿತ್ರ ಹೊಸತೇನನ್ನೋ ಒಡಲಲ್ಲಿಟ್ಟುಕೊಂಡಿದೆ ಎಂಬ ಸುಳಿವೂ ಪ್ರೇಕ್ಷಕರಿಗೆ ಸಿಕ್ಕಿ ಬಿಟ್ಟಿದೆ.

ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನು ಕೃಪಾ ಸಾಗರ್ ನಮ್ಮ ನಡುವೆಯೇ ನಡೆಯೋ ಘಾತುಕ ಘಟನಾವಳಿಗಳ ಸ್ಫೂರ್ತಿಯಿಂದ ಕಥೆ ಹೊಸೆದು ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು ಸದಾ ಸಾರ್ವಜನಿಕರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರೋ ಪೊಲೀಸರಿಗೆ ಅರ್ಪಿಸಲಾಗಿದೆ. ಕಥೆಯ ವಿಚಾರಕ್ಕೆ ಬಂದರೆ ಪೊಲೀಸರ ಪಾತ್ರ ಪ್ರಧಾನವಾಗಿದೆಯಂತೆ. ಪೊಲೀಸರಿಗೆಂದೇ ವಿಶೇಷ ಹಾಡೊಂದನ್ನು ಚಿತ್ರತಂಡ ರೆಡಿ ಮಾಡಿದೆ. ಅದನ್ನು ವಿಜಯ್ ಪ್ರಕಾಶ್ ಹಾಡಿದ್ದಾರಂತೆ.

ಮದನ್ ರಾಜ್ ಮತ್ತು ಅಮೃತಾ ಈ ಮೂಲಕ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮಂಡ್ಯ ರಮೇಶ್, ರಮೇಶ್ ಪಂಡಿತ್ ಸೇರಿದಂತೆ ಅದ್ಧೂರಿ ತಾರಾಗಣ ಈ ಚಿತ್ರಕ್ಕಿದೆ. ಈಗಾಗಲೇ ಟೀಸರ್‍ಗೆ ಸಿಗುತ್ತಿರೋ ಭಾರೀ ಮೆಚ್ಚುಗೆ ಚಿತ್ರತಂಡಕ್ಕೆ ಹೊಸ ಹುರುಪು ತುಂಬಿದೆ. ಅದೇ ಜೋಶ್ ನಲ್ಲಿ ಆದಷ್ಟು ಬೇಗನೆ ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *