ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ – ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ

ಕನ್ನಡ ನೆಲದಲ್ಲೇ ಇಂದು ಕನ್ನಡ ಕಳೆದು ಹೋದ ಸ್ಥಿತಿಯಲ್ಲಿದೆ. ಕರ್ನಾಟಕದಿಂದಲೇ ಕಳೆದುಹೋದ ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿಕೊಳ್ಳಲು ಹೆಣಗಾಡುವ ಕಥೆ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯದ್ದು.

ಅದು ಕಾಸರಗೋಡಿನ ಒಂದು ಸರ್ಕಾರಿ ಶಾಲೆ. ಅದು ಶಿಥಿಲಾವಸ್ಥೆಯಲ್ಲಿದೆ ಎಂಬ ನೆಪ ಹೇಳಿ ಕೇರಳದ ಶಿಕ್ಷಣ ಅಧಿಕಾರಿಯೊಬ್ಬ ಶಾಲೆಯನ್ನು ಮುಚ್ಚಿಸುತ್ತಾನೆ. ಮಕ್ಕಳು ಮತ್ತು ಊರ ಮಂದಿ ದಿಕ್ಕು ಕಾಣದಂತಾಗುತ್ತಾರೆ. ಕಡೆಗೆ ಮಕ್ಕಳೆಲ್ಲ ಸೇರಿ ಸಮಾಜಸೇವಕ ಅನಂತಪದ್ಮನಾಭ ಪಿ. (ಅನಂತನಾಗ್) ಅವರನ್ನು ಕರೆತರುತ್ತಾರೆ. ಅನಂತ್ ಬರೋತನಕ ಮಕ್ಕಳ ಕೀಟಲೆ, ಸಣ್ಣ ವಯಸ್ಸಿನಲ್ಲೇ ಶುರುವಾಗುವ ಪ್ರೀತಿಯ ಸೆಳೆತ ಮುಂತಾದವುಗಳ ಜೊತೆಗೆ ಸಾಗುವ ಕಥೆ ಅನಂತ್ ನಾಗ್ ಅವರು ಬರುತ್ತಿದ್ದಂತೇ ಬೇರೆಯದ್ದೇ ಆಯಾಮ ಪಡೆಯುತ್ತದೆ. ಅನಂತ್ ನಾಗ್ ಕೋರ್ಟ್ ನಲ್ಲಿ ವಾದ ಮಂಡಿಸುವ ಸಂದರ್ಭದಲ್ಲಂತೂ ಎಂಥವರಿಗಾದರೂ ನಗು ಮತ್ತು ಅಳು ಒಟ್ಟೊಟ್ಟಿಗೆ ಒತ್ತರಿಸಿಕೊಂಡು ಬರುತ್ತದೆ.

ಬಹುಶಃ ಇದೇ ಕಥೆಯನ್ನೇ ತೀರಾ ಸೀರಿಯಸ್ಸಾಗಿ ಹೇಳಿದ್ದಿದ್ದರೆ ಅದು ಮಾಮೂಲಿ ಕಲಾತ್ಮಕ ಸಿನಿಮಾವಾಗಿ ಅಥವಾ ಡಾಕ್ಯುಮೆಂಟರಿ ರೀತಿಯ ಚಿತ್ರವಾಗಿಯಷ್ಟೇ ದಾಖಲಾಗುತ್ತಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಗಡಿನಾಡು ಮತ್ತು ಭಾಷೆಯ ಸಮಸ್ಯೆಯನ್ನು ಹೊಂದಿರುವ ತೀರಾ ಗಂಭೀರವಾದ ವಿಚಾರವನ್ನು ಪಕ್ಕಾ ಮನರಂಜನಾ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಮೂಲಕ ರಂಜಿಸುತ್ತಲೇ ಸೀರಿಯಸ್ಸಾದ ವಿಚಾರವನ್ನು ನೋಡುಗರ ಮನಸ್ಸಿಗೆ ದಾಟಿಸಿದ್ದಾರೆ.

ಪ್ರಮೋದ್ ಶೆಟ್ಟಿ, ಅನಂತ್ ನಾಗ್ ಮತ್ತು ಎಲ್ಲ ಮಕ್ಕಳೂ ಅದ್ಭುತವಾಗಿ ನಟಿಸಿದ್ದಾರೆ. ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣ ಕಣ್ಣೆದುರೇ ಕಾಸರಗೋಡನ್ನು ಕಟ್ಟಿಕೊಟ್ಟಿದೆ. ರಾಜ್ ಬಿ. ಶೆಟ್ಟಿ ಅವರ ಸಂಭಾಷಣೆ ಮನಸ್ಸಿಗೆ ಹತ್ತಿರವಾಗಿದೆ. ಒಟ್ಟಾರೆ ಒದು ಕನ್ನಡದ ಎಲ್ಲ ಮನಸ್ಸುಗಳೂ ಮಿಸ್ ಮಾಡದೇ ನೋಡಬೇಕಿರುವ ಚಿತ್ರ ಅನ್ನೋದು ನಿಜ. ಇದನ್ನು ಓದಿ: ಪ್ರಾಥಮಿಕ ಶಾಲೆಯಲ್ಲೇ ಫೇಲ್ ಆಗಿದ್ದೆ ಅನ್ನೋದನ್ನ ಬಿಚ್ಚಿಟ್ರು ರಿಷಬ್ ಶೆಟ್ಟಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

 

Comments

Leave a Reply

Your email address will not be published. Required fields are marked *