ಹೇಳಿದ್ದು 520, ವಿತರಣೆಯಾಗಿದ್ದು 257 – ಉಳಿದ ಸೀರೆ ಎಲ್ಲಿ ಹೋಯ್ತು: ಅಧಿಕಾರಿಗಳಿಗೆ ಮಹಿಳೆಯರಿಂದ ತರಾಟೆ

ದಾವಣಗೆರೆ: ರೇಷ್ಮೆ ಸೀರೆ ಅಂದರೆ ಯಾವ ಮಹಿಳೆಯರಿಗೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ 15 ಸಾವಿರ ರೂ. ಮೌಲ್ಯದ ಸೀರೆ ಡಿಸ್ಕೌಂಟ್ ಬೆಲೆಯಲ್ಲಿ ಸಿಗುತ್ತೆ ಅಂದರೆ ನಾರಿಮಣಿಯರು ಸುಮ್ಮನಿರುತ್ತರಾ? ನಾ ಮುಂದು ತಾ ಮುಂದೆ ಅಂತ ಸೀರೆಗಾಗಿ ಮುಗಿ ಬೀಳುತ್ತಾರೆ. ಆದರೆ ಇಂದು ದಾವಣಗೆರೆಯಲ್ಲಿ ಡಿಸ್ಕೌಂಟ್ ಸೀರೆಗೆ ಮುಗಿಬಿದ್ದಿದ್ದ ಮಹಿಳೆಯರಿಗೆ ಸಿಕ್ಕಿದ್ದು ಮಾತ್ರ ನಿರಾಸೆ.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‍ಐಸಿ) ವತಿಯಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ಕಡಿಮೆ ಬೆಲೆಗೆ ಸೀರೆ ವಿತರಣೆ ಮಾಡಲಾಗುತಿತ್ತು. ದಾವಣಗೆರೆ ನಗರದ ರೋಟರಿ ಬಾಲ ಭವನದಲ್ಲಿ ರೇಷ್ಮೆ ಸೀರೆ ವಿತರಣೆ ಸಿದ್ಧತೆ ನಡೆಸಲಾಗಿತ್ತು. ಹೀಗಾಗಿ ನೂರಾರು ಮಂದಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಆದರೆ ಸರತಿ ಸಾಲಿನಲ್ಲಿ ನಿಂತರೂ ಸೀರೆ ಸಿಗದ ವೇಳೆ ಮಹಿಳೆಯರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಪೊಲೀಸರು ಮಹಿಳೆಯರನ್ನು ನಿಯಂತ್ರಿಸಲು ಹರ ಸಾಹಸ ಪಟ್ಟಿದ್ದಾರೆ.

ನಗರದಲ್ಲಿ 520 ಸೀರೆ ವಿತರಣೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಇದರಲ್ಲಿ ಕೇವಲ 257 ಸೀರೆ ಮಾತ್ರ ನೀಡಲಾಗಿದೆ. ಉಳಿದ ಸೀರೆಗಳು ಏನಾದವು ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಅಧಿಕಾರಿಗಳು ಅವುಗಳನ್ನು ಮಾರಾಟ ಮಾಡಿದ್ದಾರೆ ಎಂದು ಮಹಿಳೆಯರು ಆರೋಪ ಮಾಡಿದ್ದಾರೆ.

ಸೀರೆ ಪಡೆಯಲು ಆಧಾರ್ ಕಾರ್ಡ್ ನೀಡಿ ನೋಂದಣಿ ಮಾಡಿಸಿಕೊಂಡವರಿಗೆ ಸೀರೆ ವಿತರಣೆಗೆ ಸಿದ್ಧತೆ ಮಾಡಲಾಗಿತ್ತು. ಜೊತೆಗೆ ನೋಂದಣಿ ಮಾಡಿದ ಮಹಿಳೆಯರಿಗೆ ಟೋಕನ್ ನೀಡಿ ಸೀರೆ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಸೀರೆ ವಿತರಣೆಯಲ್ಲಿ ಲೋಪ ಮಾಡಲಾಗಿದೆ ಎಂಬ ಮಹಿಳೆಯರ ಆರೋಪ ಸುಳ್ಳು. ಅಧಿಕಾರಿಗಳು ನಮಗೆ ಕೇವಲ 257 ಸೀರೆಗಳನ್ನು ಮಾತ್ರ ವಿತರಣೆ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ನಾವು ನೀಡಿದ್ದೇವೆ ಎಂದು ಕೆಎಸ್‍ಐಸಿ ವ್ಯವಸ್ಥಾಪಕ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *