ಗಾಯಕಿ, ನೃತ್ಯಗಾರ್ತಿ ಸ್ವಪ್ನಾ ಚೌಧರಿ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆದಿರುವ ಹರಿಯಾಣದ ಜಾನಪದ ಗಾಯಕಿ, ನೃತ್ಯಗಾರ್ತಿ ಸ್ವಪ್ನಾ ಚೌಧರಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ದೆಹಲಿಯ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾನ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಸೇರಿದಂತೆ ಅನೇಕ ಮುಖಂಡರ ನೇತೃತ್ವದಲ್ಲಿ ಸ್ವಪ್ನಾ ಚೌಧರಿ ಅಧಿಕೃತವಾಗಿ ಕಮಲದ ಮನೆ ಪ್ರವೇಶಿಸಿದ್ದಾರೆ.

ಈ ವೇಳೆ ಮಾತನಾಡಿದ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಸ್ವಪ್ನಾ ಚೌಧರಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಖುಷಿ ತಂದಿದೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ಮಾರ್ಚ್ ತಿಂಗಳಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಜೊತೆಗಿರುವ ಸ್ವಪ್ನಾ ಚೌಧರಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೇಮಾಮಾಲಿನಿ ವಿರುದ್ಧ ಸ್ವಪ್ನಾ ಚೌಧರಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ ಎಂಬ ಮಾತು ಕೇಳಿ ಬಂದಿತ್ತು.

ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸ್ವಪ್ನಾ ಚೌಧರಿ, ನಾನು ಕಾಂಗ್ರೆಸ್ ಸೇರುವುದಿಲ್ಲ. ಅದು ಹಳೆಯ ಫೋಟೋ ಎಂದು ಸ್ಪಷ್ಪಪಡಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು.

28 ವರ್ಷದ ಸ್ವಪ್ನಾ ಚೌಧರಿ ಅವರು 2016ರಲ್ಲಿ ದಲಿತರ ನಿಂದನೆ ಆರೋಪದಿಂದಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಸುದ್ದಿಯಾಗಿದ್ದರು. ಬಳಿಕ ಬಿಗ್ ಬಾಸ್‍ನ 2018ರ ಆವೃತ್ತಿಯಲ್ಲಿ ಸ್ಪರ್ಧಿಸಿ, ಜನಪ್ರಿಯತೆ ಪಡೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *