ಅದ್ದೂರಿ ಸೆಟ್ ನಲ್ಲಿ ಮೂಡಿ ಬಂತು ‘ಸಂಜು-ಗೀತಾ’ ಸಾಂಗ್

ಒಂದು ಪ್ರೇಮಕಥೆ ಎಂದರೆ ಅಲ್ಲಿ ಖುಷಿ, ತ್ಯಾಗದ ಜೊತೆಗೆ ಕಾಡುವ ಕಥೆ ಇರಬೇಕು. ಇದನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದವರು ನಿರ್ದೇಶಕ ನಾಗಶೇಖರ್.  ಅದಕ್ಕೆ  ಮೈನಾ, ಸಂಜು ವೆಡ್ಸ್ ಗೀತಾಗಿಂತ ಉದಾಹರಣೆ ಬೇಕಿಲ್ಲ.  ಈಗ ಹೊಸ ಸಂಜು ಹಾಗೂ ಗೀತಾರ (Sanju Weds Geetha 2) ನವೀನ ಪ್ರೇಮಕಥೆಯನ್ನು ನಾಗಶೇಖರ್  ಹೇಳಹೊರಟಿದ್ದಾರೆ. ಶ್ರೀನಗರ ಕಿಟ್ಟಿ (Srinagar Kitty) ಜೊತೆ  ರಮ್ಯಾ ಬದಲು ರಚಿತಾ ರಾಮ್  (Rachita Ram)ಬಂದಿದ್ದಾರೆ.

ರೇಷ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ  ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಾವ್ಯವಿದು. ಸದ್ಯ ಚಿತ್ರದ ಬಹುತೇಕ  ಚಿತ್ರೀಕರಣ, ಎಡಿಟಿಂಗ್ ಮುಗಿದಿದ್ದು ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್  ಕಾರ್ಯ ನಡೆದಿದೆ. ಈಗಾಗಲೇ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ  ಮೂರನೇ ಹಂತದ ಚಿತ್ರೀಕರಣ ಮುಗಿಸಿದ್ದು, ಈಗ  ನಾಲ್ಕನೇ ಹಂತದ ಚಿತ್ರೀಕರಣ ಶುರುವಾಗಿದೆ. ಕುಣಿಗಲ್ ನಲ್ಲಿ  ಅದ್ದೂರಿ ಹಾಡೊಂದರ ಶೂಟಿಂಗ್ ನಡೆದಿದೆ.

ಈ ಹಾಡು, ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಕುಣಿಗಲ್ ನ ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳ ಕಾಲ  ಪ್ರಮುಖವಾದ  ಕಲರ್ ಫುಲ್  ಹಾಡಿನ  ಚಿತ್ರೀಕರಣ ನಡೆಸಲಾಯಿತು. ತುಂಬಾ ಅದ್ದೂರಿಯಾಗಿ ಮೂಡಿ ಬಂದಿರುವ ಈ ಹಾಡಿಗೆ ಸುಮಾರು 45 ರಿಂದ 50 ಲಕ್ಷ ರೂ. ವರೆಗೆ ಖರ್ಚು  ಮಾಡಲಾಗಿದೆ. ಇದಲ್ಲದೆ ಉಳಿದ ಹಾಡುಗಳನ್ನೂ ಸಹ ಇನ್ನೂ ಅದ್ದೂರಿಯಾಗಿ  ಆಗಿ ಚಿತ್ರೀಕರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಒಟ್ಟಾರೆ ಇಡೀ ಚಿತ್ರ ವೈಭವಯುತವಾಗಿ ಮೂಡಿಬರಬೇಕು. ಅದ್ಭುತ ದೃಶ್ಯಕಾವ್ಯವಾಗಿ ಸಂಜು ವೆಡ್ಸ್ ಗೀತಾ ಮೂಡಿಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.

 

ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ  ನಿರ್ಮಾಪಕ  ಛಲವಾದಿ ಕುಮಾರ್ ಅವರು ಈ  ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮ  ೫ ಸುಂದರವಾದ ಹಾಡುಗಳನ್ನು  ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ.  ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ  ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.