ಸರ್ಕಾರ ರಚಿಸಲು ಕೊನೆಗೂ ಶಿವಸೇನೆಗೆ ಕಾಂಗ್ರೆಸ್-ಎನ್‍ಸಿಪಿ ಬೆಂಬಲ

– 5 ವರ್ಷ ಶಿವಸೇನೆಗೆ ಸಿಎಂ ಪಟ್ಟ ಫಿಕ್ಸ್
– ಶಿವಸೇನೆ, ಎನ್‍ಸಿಪಿಗೆ ತಲಾ 14 ಮಂತ್ರಿಗಿರಿ
– ಕಾಂಗ್ರೆಸ್ 12 ಸಚಿವ ಸ್ಥಾನದ ಒಪ್ಪಂದ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಕೊನೆಗೂ ಕಾಂಗ್ರೆಸ್ ಹಾಗೂ ಎನ್‍ಸಿಪಿ ಶಿವಸೇನೆಗೆ ಬೆಂಬಲ ಸೂಚಿಸಿವೆ. ಒಪ್ಪಂದ ಪ್ರಕಾರ ಪೂರ್ಣಾವಧಿ ಮುಖ್ಯಮಂತ್ರಿ ಪಟ್ಟ ಶಿವಸೇನೆ ಪಾಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಸೇನೆ ನಾಯಕ ಸಂಜಯ್ ರಾವತ್, 5 ವರ್ಷ ಮುಖ್ಯಮಂತ್ರಿ ಸ್ಥಾನ ಶಿವಸೇನೆ ಬಳಿಯೇ ಇರುತ್ತದೆ. ಅಷ್ಟೇ ಅಲ್ಲದೆ ಮುಂದಿನ 25 ವರ್ಷಗಳ ಕಾಲ ಶಿವಸೇನೆ ಮುಖ್ಯಮಂತ್ರಿ ಸ್ಥಾನವನ್ನು ಹೊಂದಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಮಹಾ’ ಬಿಕ್ಕಟ್ಟು- ಕೊನೆಗೂ ಮೌನ ಮುರಿದ ಅಮಿತ್ ಶಾ

ಸಂಭಾವ್ಯ ಮೈತ್ರಿ ಪಕ್ಷಗಳ ನಾಯಕರಾದ ಸೋನಿಯಾ ಹಾಗೂ ಶರದ್ ಪವಾರ್ ಅವರೊಂದಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸಚಿವ ಸ್ಥಾನ ಹಂಚಿಕೆ ಸೂತ್ರದ ಬಗ್ಗೆ ಅವರು ಚಿಂತಿಸಬೇಕಾಗಿಲ್ಲ. ಅವರಿಗೆ ನೀಡಬೇಕಾದ ಸ್ಥಾನಮಾನವನ್ನು ಶಿವಸೇನೆ ನೀಡಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ – 3 ಕಾರಣಗಳಿಂದಾಗಿ ರಾಜ್ಯಪಾಲರಿಂದ ಶಿಫಾರಸು

ಮೈತ್ರಿ ಸೂತ್ರದ ಪ್ರಕಾರ ಶಿವಸೇನೆ 5 ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ತನ್ನ ಬಳಿ ಉಳಿಸಿಕೊಳ್ಳಲಿದೆ. ಜೊತೆಗೆ ಶಿವಸೇನೆ ಹಾಗೂ ಎನ್‍ಸಿಪಿ ತಲಾ 14 ಸಚಿವ ಸ್ಥಾನವನ್ನು ಹಂಚಿಕೊಳ್ಳಲಿವೆ. ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್‍ಗೂ 12 ಸಚಿವ ಸ್ಥಾನ ಸಿಗಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇತ್ತ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್‍ಸಿಪಿ ನಾಯಕ ಶರದ್ ಪವಾರ್, ಈ ಮೈತ್ರಿ ಸರ್ಕಾರವು ರಚನೆಯಾಗಲಿದ್ದು, 5 ವರ್ಷಗಳ ಕಾಲ ಸುಭದ್ರ ಆಡಳಿತ ನಡೆಸುತ್ತದೆ. ಈ ನಿಟ್ಟಿನಲ್ಲಿ ನಾವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ವಿರುದ್ಧ ವ್ಯಂಗ್ಯವಾಡಿದ ಶರ್ ಪವಾರ್, ಕೆಲ ವರ್ಷಗಳಿಂದ ದೇವೇಂದ್ರ ಜೀ ನನಗೆ ಗೊತ್ತು. ಆದರೆ ಅವರು ಜೋತಿಷ್ಯ ಶಾಸ್ತ್ರದ ವಿದ್ಯಾರ್ಥಿ ಎನ್ನುವುದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಅಸಮಾಧಾನ ಹೊರಹಾಕಿರುವ ಬಿಜೆಪಿ ಮುಖಂಡ ಆಶಿಶ್ ಶೆಲಾರ್, ಮಹಾರಾಷ್ಟ್ರದ ಜನರು ರಾಜಕೀಯ ಡ್ರಾಮಾದಿಂದ ಬೇಸತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಧ್ಯೆ ಯಾರು ಬಿರುಕು ಸೃಷ್ಟಿಸಿದ್ದಾರೆ ಎನ್ನುವುದನ್ನು ರಾಜ್ಯದ ಜನರು ನೋಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿವೆ. ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದರೂ ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ನಮಗೆ ಕೊಡಲೇಬೇಕು ಎಂದು ಶಿವಸೇನೆ ಹಠ ಹಿಡಿದಿತ್ತು. ಇದಕ್ಕೆ ಬಿಜೆಪಿ ಒಪ್ಪದ ಹಿನ್ನೆಲೆಯಲ್ಲಿ ಶಿವಸೇನೆಯೂ ಕಾಂಗ್ರೆಸ್ ಹಾಗೂ ಎನ್‍ಸಿಪಿ ಜೊತೆಗೆ ಸೇರಿ ಸರ್ಕಾರ ರಚಿಸಲು ಮುಂದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಎನ್‍ಸಿಪಿ 54 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನ ಪಡೆದುಕೊಂಡಿದೆ.

Comments

Leave a Reply

Your email address will not be published. Required fields are marked *