ಕಾಂಗ್ರೆಸ್‍ಗೆ ನಿನ್ನೆ ಬೆಲ್ಲ ಕೊಟ್ಟು, ಇಂದು ಬೇವು ಕೊಟ್ಟ ಆಪ್!

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ‘ಮಹಾಘಟಬಂಧನ್’ ಮೂಲಕ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ಮಹಾಘಟಬಂಧನ್ ಗೆ ಕರ್ನಾಟಕದಲ್ಲಿಯೇ ಮುನ್ನುಡಿ ಬರೆದಿದ್ದು, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ಬುಧವಾರ ಅಪ್ ಮುಖಂಡರೊಬ್ಬರು ಮಹಾಘಟಬಂಧನ್ ಸೇರುವ ಇಂಗಿತ ವ್ಯಕ್ತಪಡಿಸಿ ಕಾಂಗ್ರೆಸ್‍ಗೆ ಸಿಹಿ ಸುದ್ದಿ ನೀಡಿದ್ದರು. ಆದ್ರೆ ಇಂದು ಮತ್ತೋರ್ವ ಮುಖಂಡ ಕಹಿ ಸುದ್ದಿ ನೀಡಿದ್ದಾರೆ.

ದೆಹಲಿಯಲ್ಲಿ ಅಧಿಕಾರ ಹಿಡಿದಿರುವ ಆಪ್ ಮಹಾಘಟಬಂಧನ್ ದಿಂದ ದೂರ ಉಳಿಯುವುದಾಗಿ ಘೋಷಿಸಿಕೊಂಡಿದೆ. ಈ ಕುರಿತು ಆಪ್ ಪಕ್ಷದ ನಾಯಕ ಸಂಜಯ್ ಸಿಂಗ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಏಕಾಂಗಿಯೇ ಎದುರಿಸಲಿದೆ. ಯಾರೊಂದಿಗೆ ಮೈತ್ರಿ ಮಾಡಿಕೊಳ್ಳದೇ ನಮ್ಮ ಸಾಮರ್ಥ್ಯದಿಂದಲೇ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಪಕ್ಷದ ಸಭೆಯ ಬಳಿಕ ಮಾತನಾಡಿದ ಸಂಜಯ್ ಸಿಂಗ್, ಪಂಜಾಬ್, ಗೋವಾ, ದೆಹಲಿ, ಮತ್ತು ಹರಿಯಾಣಗಳಲ್ಲಿ ಆಪ್ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಯಾವುದೇ ಘಟಬಂಧನ್ ಜೊತೆ ಸೇರಿಕೊಳ್ಳುವ ಮೂಲಕ ಪಕ್ಷದ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದಕ್ಕೆ ನಾವು ಇಷ್ಟಪಡಲ್ಲ. ಫೆಬ್ರವರಿ 15ರ ನಂತರ ಎಲ್ಲ ರಾಜ್ಯಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಿಕೊಳ್ಳಲಾಗುವುದು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಮ್ಮೊಂದಿಗೆ ಇರುತ್ತಾರೆ ಅಂತಾ ಹೇಳಿದರು.

ಬುಧವಾರ ಆಪ್ ಪಕ್ಷದ ಮುಖಂಡ ಗೋಪಾಲ್ ರಾಯ್ ಎಂಬವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಯಾರ ಜೊತೆಯಲ್ಲಾದ್ರೂ ಮೈತ್ರಿ ಮಾಡಿಕೊಳ್ಳಲು ನಾವು ಸಿದ್ಧ ಎಂದು ಹೇಳುವ ಮೂಲಕ ಮಹಾಘಟಬಂಧನ್ ಸೇರುವ ಮುನ್ಸೂಚನೆ ಕೊಟ್ಟಿದ್ದರು. ಆದ್ರೆ ಇಂದು ಸಂಜಯ್ ಸಿಂಗ್ ಏಕಾಂಗಿ ಸ್ಪರ್ಧೆ ಮಾಡೋದು ಖಚಿತ ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *