ಬಿಎಸ್‍ವೈ ಅಡ್ಡಾದಲ್ಲಿ ಅಖಾಡಕ್ಕೆ ಇಳಿದ ದಿನವೇ ಡಿಕೆಶಿಯಿಂದ ಟ್ರಬಲ್ ಶೂಟ್!

ಶಿವಮೊಗ್ಗ: ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ಕುಮಾರಸ್ವಾಮಿ ಮತ್ತು ಡಿಕೆ ಬ್ರದರ್ಸ್ ತಂತ್ರಗಾರಿಕೆ ರೂಪಿಸಿದ್ದು, ಭದ್ರಾವತಿಯಲ್ಲಿ ಮೊದಲ ಯತ್ನದಲ್ಲೇ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದ ಭದ್ರಾವತಿಯಲ್ಲಿ ಬಂಡಾಯ ಶಮನವಾಗಿದೆ. ಹಾವು ಮುಂಗುಸಿಯಂತಿದ್ದ ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್, ಜೆಡಿಎಸ್‍ನ ಅಪ್ಪಾಜಿ ಗೌಡ ದಶಕಗಳ ಬಳಿಕ ಒಂದಾಗಿದ್ದಾರೆ. ಇಬ್ಬರ ಮಧ್ಯೆ ಇದ್ದ ಮುನಿಸಿಗೆ ಟ್ರಬಲ್ ಶೂಟರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇತಿಶ್ರೀ ಹಾಡಿದ್ದಾರೆ.

ಇವರಿಬ್ಬರನ್ನೂ ಡಿ.ಕೆ ಶಿವಕುಮಾರ್ ಒಂದು ಮಾಡಿದ್ದು, ಇನ್ಮುಂದೆ ಇವರಿಬ್ಬರೂ ಒಟ್ಟಿಗೆ ಜಂಟಿ ಪ್ರಚಾರ ಮಾಡಲಿದ್ದಾರೆ. ಇಬ್ಬರೂ ಜೊತೆಗೆ ಚುನಾವಣೆ ನಡೆಸಲಿದ್ದಾರೆ. ಕಾರ್ಯಕರ್ತರು, ನಾಯಕರ ನಡುವೆ ಒಟ್ಟಿಗೆ ಸಾಗಲು ತೀರ್ಮಾನಿಸಿದ್ದಾರೆ ಎಂದು ಡಿಕೆಶಿ ಘೋಷಿಸಿದ್ದಾರೆ.

ಶುಕ್ರವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ಕರೆದ ಡಿಕೆಶಿ ಇಬ್ಬರನ್ನು ಅಕ್ಕ ಪಕ್ಕ ಕೂರಿಸಿಕೊಂಡು, ಇಬ್ಬರು ನಾಯಕರು ಒಂದಾಗಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಕಾರಣಕ್ಕೆ ಮಾಜಿ ಹಾಲಿ ಶಾಸಕರು ಒಟ್ಟಿಗೆ ಪ್ರಚಾರ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಜಂಟಿ ಪ್ರಚಾರ ಮಾಡಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಶಿವಮೊಗ್ಗವನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಮೈತ್ರಿ ಸರ್ಕಾರದ ಪ್ಲಾನ್‍ಗೆ ಯಡಿಯೂರಪ್ಪ ಹೆದರಿ ಬಿಟ್ಟರಾ ಎಂಬ ಪ್ರಶ್ನೆ ಎದುರಾಗಿದೆ. ಶುಕ್ರವಾರದಿಂದ ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪ ಇನ್ನೂ ಮೂರು ದಿನ ಶಿವಮೊಗ್ಗದಲ್ಲಿ ಉಳಿದು ಜೋಡೆತ್ತುಗಳಿಗೆ ತಂತ್ರಗಳಿಗೆ ಪ್ರತಿತಂತ್ರ ರೂಪಿಸಲಿದ್ದಾರೆ. ಶಿವಮೊಗ್ಗ, ಭದ್ರಾವತಿಯಲ್ಲಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಘವೇಂದ್ರ ಪರವಾಗಿ ಪ್ರಚಾರ ನಡೆಸಲಿದ್ದಾರೆ.

Comments

Leave a Reply

Your email address will not be published. Required fields are marked *