ಸ್ಟಾರ್ ಕನ್ನಡಿಗನೊಂದಿಗೆ ಆಟೋ ರಾಣಿಯಾದ ಶಾಲಿನಿ!

ಬೆಂಗಳೂರು: ಸಿನಿಮಾ ಈವತ್ತಿಗೆ ಒಂದು ಕಲೆಯೂ ಹೌದು ಉದ್ಯಮವೂ ಹೌದು. ಆದರೆ ಯಾವ ವ್ಯವಹಾರಗಳ ಕಿಸುರೂ ಇಲ್ಲದೆಯೂ ಇಲ್ಲಿ ಆಗಾಗ ಒಂದಷ್ಟು ಸಿನಿಮಾಗಳು ರೆಡಿಯಾಗುತ್ತಿರುತ್ತವೆ. ಬದುಕಿನ ನಾನಾ ಸಂಕೋಲೆಗಳಲ್ಲಿ ಬಂಧಿಗಳಾಗಿದ್ದವರೂ ಕೂಡಾ ಅಚ್ಚರಿದಾಯಕವಾಗಿ ಈ ಕಲೆಯ ತೆಕ್ಕೆಗೆ ಬೀಳುತ್ತಾರೆ. ಇಂಥಾದ್ದೊಂದು ಮಾಯಕ ಚಾಲ್ತಿಯಲ್ಲಿರದೇ ಇದ್ದಿದ್ದರೆ ‘ಸ್ಟಾರ್ ಕನ್ನಡಿಗ’ ಚಿತ್ರ ರೂಪುಗೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ!

ಇದು ವಿ.ಆರ್.ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರೋ ಚಿತ್ರ. ಉದ್ಯಮಿಗಳು, ಹಣವಂತರು ಮಾತ್ರವೇ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಸಾಧ್ಯ ಎಂಬಂಥಾ ವಾತಾವರಣವಿದೆ. ಆದರೆ ಈ ಚಿತ್ರವನ್ನು ನಿರ್ಮಾಣ ಮಾಡಿರುವುದು ಆಟೋ ಡ್ರೈವರ್‍ಗಳೆಂದರೆ ಯಾರಿಗಾದರೂ ಅಚ್ಚರಿಯಾಗದೇ ಇರಲು ಸಾಧ್ಯವಿಲ್ಲ. ಇವರೆಲ್ಲ ಸಿನಿಮಾ ಪ್ರೀತಿಯಿಂದಲೇ ಸ್ಟಾರ್ ಕನ್ನಡಿಗನನ್ನು ಪೊರೆದಿದ್ದಾರೆ. ಈ ಪ್ರೀತಿಯ ಕಾರಣದಿಂದಲೇ ಈ ಚಿತ್ರ ಇದೇ ಕನ್ನಡ ರಾಜ್ಯೋತ್ಸವದಂದು ತೆರೆ ಕಾಣುತ್ತಿದೆ.

ಈ ಚಿತ್ರದಲ್ಲಿ ಶಾಲಿನಿ ಭಟ್ ಮಂಜುನಾಥ್‍ಗೆ ನಾಯಕಿಯಾಗಿ ನಟಿಸಿದ್ದಾರೆ. ಇದೇನು ಮಾಮೂಲಿ ಮೆಥೆಡ್ಡಿನ ಪಾತ್ರವಲ್ಲ. ಅವರಿಲ್ಲಿ ಶ್ರಮ ಜೀವಿಯಾದ, ಬದುಕಿನ ಬಗ್ಗೆ ಮಹತ್ವಾಕಾಂಕ್ಷೆ ಇರೋ ಅನಾಥ ಹುಡುಗಿಯಾಗಿ ನಟಿಸಿದ್ದಾರೆ. ಹಗಲೆಲ್ಲ ಆಟೋ ಓಡಿಸಿ ಸಂಜೆಯಾಗುತ್ತಲೇ ಕಾಲೇಜಿಗೆ ತೆರಳೋ ಮಾದರಿ ಹೆಣ್ಣು ಮಗಳಾಗಿ, ಪ್ರೇಮಿಯಾಗಿಯೂ ಅವರು ಕಾಣಿಸಿಕೊಂಡಿದ್ದಾರಂತೆ. ಇಂಥಾ ಚೆಂದದ ಕಥೆ ಹೊಂದಿರೋ ಈ ಚಿತ್ರ ಕನ್ನಡ ರಾಜ್ಯೋತ್ಸವದಂದೇ ತೆರೆ ಕಾಣುತ್ತಿದೆ. ಈಗಾಗಲೇ ಹಾಡು, ಟ್ರೇಲರ್‍ನೊಂದಿಗೆ ಗಮನ ಸೆಳೆದಿರೋ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲೊಂದು ಕಾತರ ಇದ್ದೇ ಇದೆ.

Comments

Leave a Reply

Your email address will not be published. Required fields are marked *