ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದವ್ರಿಗೆ ಶಿಕ್ಷೆ ಆಗ್ಬೇಕು: ರಾಕ್‍ಲೈನ್ ವೆಂಕಟೇಶ್

– ನಿಮ್ಮನೆ ಹೆಣ್ಮಕ್ಳನ್ನ ಖುಷಿಯಾಗಿ ನೋಡ್ಕೊಳ್ಳಿ ಯಾವ್ ಸ್ಟಾರ್ ಕೂಡ ಕಾಪಾಡಲ್ಲ

ಬೆಂಗಳೂರು: ನಟಿ ರಮ್ಯಾಗೆ (Actress Ramya) ಅಶ್ಲೀಲ ಸಂದೇಶ ಕಳುಹಿಸಿದವರಿಗೆ ಶಿಕ್ಷೆಯಾಗಬೇಕು ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ (Rockline Venkatesh) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಮ್ಯಾಗೆ ದರ್ಶನ್ ಫ್ಯಾನ್ಸ್ (Darshan Fans) ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದರು. ಇಂತಹ ವಿಚಾರ ಉದ್ಭವ ಮಾಡಿದವರು ಹಾಗೂ ಮುಂದುವರೆಸಿಕೊಂಡು ಹೋಗುವವರಿಗೆ ಶಿಕ್ಷೆ ಆಗ್ಬೇಕು. ಎದುರು ನಿಂತು ಮಾತನಾಡುವವರನ್ನು ಎದುರಿಸಬಹುದು. ಎಲ್ಲೋ ನಿಂತು ಮಾತಾಡುವವರನ್ನು ಹೇಗೆ ಸಹಿಸಿಕೊಳ್ಳೋದು? ಯಾರೇ ಹೀರೋ ಆಗಿದ್ರೂ ಅವರ ಅಭಿಮಾನಿಗಳು ನಿಜಕ್ಕೂ ಹೀಗೆ ಮಾಡಿದ್ದೇ ಆಗಿದ್ರೆ ತಪ್ಪು. ನಿಮ್ಮ ಮನೆ ಹೆಣ್ಣು ಮಕ್ಕಳನ್ನ ತೃಪ್ತಿ, ಸಂತೋಷವಾಗಿಟ್ಟುಕೊಳ್ಳಿ. ಯಾವ ಸ್ಟಾರ್ ನಟರೂ ಬಂದು ಕಾಪಾಡೋಲ್ಲ ಎಂದಿದ್ದಾರೆ. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ – ತಪ್ಪಿತಸ್ಥರಿಗೆ 5 ವರ್ಷ ಜೈಲು, ದಂಡ: ಸೈಬರ್ ತಜ್ಞರ ಮಾಹಿತಿ

ಗಾಳಿಯಲ್ಲಿ ಗುಂಡು ಹೊಡೆಯುವವರನ್ನು ಕೇರ್ ಮಾಡಲ್ಲ ನಾನು. ಹೀರೋಗೆ ಸಪೋರ್ಟ್ ಮಾಡ್ಕೊಂಡು ನಿಲ್ಲೋದಾದ್ರೆ ಎದುರು ಬಂದು ನಿಲ್ಲೋದು ಗಂಡಸ್ತನ. ಆದರೆ ಎಲ್ಲೋ ಇದ್ದುಕೊಂಡು ಕೆಟ್ಟ ಕೆಟ್ಟ ಸಂದೇಶ ಕಳುಹಿಸಿದ್ದಾರೆ. ನಾನೇ ರಮ್ಯಾಗೆ ಹೇಳ್ತೀನಿ ಪಾಠ ಕಲಿಸಿ, ಎಂದಿದ್ದಾರೆ.‌

ಇಂತಹ ವಿಚಾರಗಳಿಗಾಗಿಯೇ ಸಿನಿಮಾ ಮಾಡೋಕೆ ಭಯ ಆಗ್ತಿದೆ. ರಾಜ್ ಕುಮಾರ್, ಅಂಬರೀಶ್, ವಿಷ್ರ್ಣುವರ್ಧನ್ ಚಿತ್ರರಂಗ ಕಟ್ಟಿಕೊಟ್ರು.
ಆದರೆ ಅವರು ಕಟ್ಟಿಕೊಟ್ಟ ವೇದಿಕೆ ನಾವು ಹೇಗೆ ಬಳಕೆ ಮಾಡಿಕೊಳ್ತಿದ್ದೇವೆ? ಫಾನ್ಸ್‍ಗೆ ಮನವಿ ಮಾಡಿಕೊಳ್ಳುತ್ತೇನೆ ಈ ಧೋರಣೆ ಇರಬಾರದು. ಆಗಿರೋ ತಪ್ಪನ್ನು ಸರಿಪಡಿಸಿಕೊಂಡು ನೀವೇ ಬನ್ನಿ. ನಿಮ್ಮ ಸ್ವಾರ್ಥಕ್ಕೆ ಚಿತ್ರರಂಗ ಬಲಿ ಕೊಡಬೇಡಿ
ಯಾರೋ ಎಂಟತ್ತು ಜನ ಹೊಟ್ಟೆ ತುಂಬಿದವರ ಬಗ್ಗೆ ನೀವು ಮಾತಾಡಿದ್ರೆ ಇನ್ನುಳಿದ ಸಾವಿರಾರು ಜನ ಏನ್ಮಾಡ್ಬೇಕು? ಇಲ್ಲಿಗೆ ನಿಲ್ಲಿಸಿ. ಇದಕ್ಕೆ ಸಂಬಂಧಪಟ್ಟ ಕಲಾವಿದ ಆಗಲಿ ಅಥವಾ ಸಂಬಂಧಪಟ್ಟವರೇ ಆಗಿದ್ದರೂ ನಿಲ್ಲಿಸಿ ಎಂದಿದ್ದಾರೆ.

ಹಿರಿಯರು ಕಷ್ಟಪಟ್ಟು ಚಿತ್ರರಂಗ ಕಟ್ಟಿದ್ದಾರೆ. ಚಿತ್ರರಂಗಕ್ಕೆ ನಮ್ಮ ಕೊಡುಗೆ ಏನು? ನಾವು ಕ್ಯಾಮೆರಾ ಮುಂದೆ ಜನಗಳಿಗೆ ಬುದ್ಧಿ ಹೇಳೋದನ್ನ ನಿಜ ಜೀವನದಲ್ಲಿ ಫಾಲೋ ಮಾಡಿದ್ರೆ ಎಷ್ಟೋ ಚೆನ್ನಾಗಿರುತ್ತೆ. ಅಭಿಮಾನಿಗಳಿಗೆ ಹೇಳಿ ಪರಿಸ್ಥಿತಿ ತಿಳಿ ಪಡಿಸಬೇಕು. ನನ್ನ ಹೆಸರು ಇಟ್ಕೊಂಡು ಹೀಗೆಲ್ಲ ಮಾಡೋಕೆ ಹೋಗಬಾರದು. ದರ್ಶನ್ ಆಗಲಿ ಸುದೀಪ್ ಆಗಲಿ ಯಾವುದೇ ಸೂಪರ್ ಸ್ಟಾರ್ ಆಗಲಿ ಮುಂದೆ ಬರಬೇಕು. ನಾನು ಸ್ಪಂದಿಸುತ್ತೇನೆ. ಶೀಘ್ರದಲ್ಲೇ ಸಭೆ ಕರೆಯುತ್ತೇನೆ. ಕಲಾವಿದರನ್ನೆಲ್ಲ ಕರೆಯುತ್ತೇನೆ. ಅವರವರು ಅವರವರ ಹೇಳಿಕೆ ಕೊಡಬಹುದು. ಹೇಗೆ ಇದಕ್ಕೆ ಸ್ಪಂದಿಸಬೇಕು ಅನ್ನೋದನ್ನ ಕೇಳ್ತೀನಿ. ನಮ್ಮ ಮನೆಗೆ ಹತ್ತಿರೋ ಬೆಂಕಿಯನ್ನ ನಾವು ಆರಿಸಿಕೊಳ್ಳೋಕೆ ಪ್ರಯತ್ನ ಪಡ್ತೀವಿ ಎಂದಿದ್ದಾರೆ.

ಸರ್ಕಾರ ಸ್ಪಂದಿಸುತ್ತದೆ ಎನ್ನುವ ನಂಬಿಕೆ ಇದೆ. ನೀವೇ ಬಗೆಹರಿಸಿಕೊಳ್ಳಿ ಎಂದರೆ ಬಗೆಹರಿಸಿಕೊಳ್ತೀವಿ. ನನಗೇ ಸಹ ಕೆಟ್ಟದಾಗಿ ಬೈದು ಟ್ರೋಲ್ ಮಾಡಿದ್ರು. ಇದಕ್ಕೆ ಪ್ರೂಫ್ ಇದೆ ಅಂತ ಗೊತ್ತಾಗಿ ಲೀಗಲ್ ಆಗಿ ಕೇಸ್ ಹಾಕಿದೀನಿ. ಎಂಟತ್ತು ಕೇಸ್ ಹಾಕಿದೀನಿ. ಇನ್ನು ಹಲವು ವರ್ಷ ಅವರು ಕೋರ್ಟ್‍ಗೆ ಅಲೆಯಬೇಕು.

ಯಾಕೆ ಹೊಡೀಲಿ ಬಡೀಲಿ, ಲೀಗಲಿ ಆಕ್ಷನ್ ತಗೋತಿನಿ. ಕೆಲವರು ಬಂದ್ರು ಅವರಿಗೆ ಹೇಳ್ದೆ ಕೋರ್ಟ್‍ನಲ್ಲೇ ನೋಡ್ಕೊಳ್ಳಿ ಅಂತ. ಆವಾಗ ಯಾವ್ ಸ್ಟಾರ್ ಕೈಹಿಡಿತಾರೆ ಅಂತ ಗೊತ್ತಾಗುತ್ತೆ, ಗೊತ್ತಾಗಬೇಕು. ಅಮ್ಮ ಅಕ್ಕ ಎಲ್ಲ ದೇವರು, ಬಯ್ಯೋವ್ನಿಗೆ ಅವರೂ ಕೇಸ್ ಹಾಕಿದ್ದಾರೆ. ಲೈಫ್ ಲಾಂಗ್ ಅವರು ಕೋರ್ಟ್‍ಗೆ ಅಲೆಯಬೇಕು ಎಂದಿದ್ದಾರೆ. ಇದನ್ನೂ ಓದಿ: ಡಿ-ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ದೂರಿನ ಬಳಿಕವೂ ನಿಲ್ಲದ ಕಾಮೆಂಟ್ಸ್