ಘರ್ಜಿಸಿದ ‘ಸ್ಟಾರ್ ಕನ್ನಡಿಗ’ ನ ಹಿಂದೆ ಸವಾಲುಗಳ ಸಂತೆಯಿದೆ!

ಕಳೆದ ಕೆಲ ತಿಂಗಳುಗಳಿಂದ ‘ಸ್ಟಾರ್ ಕನ್ನಡಿಗ’ ಎಂಬೊಂದು ಚಿತ್ರ ಜನರ ನಡುವಿನ ಚರ್ಚೆಗಳ ಮೂಲಕ, ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ನಂಬಿಕೆಯ ಮೂಲಕ ಮಿರ ಮಿರನೆ ಮಿಂಚುತ್ತಿದೆ. ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರೋ ಈ ಚಿತ್ರವನ್ನು ಸಿನಮಾ ಪ್ರೇಮ ಹೊಂದಿರುವ ಆಟೋ ಚಾಲಕರೇ ಸೇರಿಕೊಂಡು ನಿರ್ದೇಶನ ಮಾಡಿರೋದು ವಿಶೇಷ. ಸಿನಿಮಾವನ್ನೇ ಉಸಿರಾಗಿಸಿಕೊಂಡು ಈ ಹಾದಿಯ ತುಂಬಾ ಹತ್ತಾರು ಸವಾಲುಗಳನ್ನು ಎದುರಿಸುತ್ತಲೇ ಸಾಗಿ ಬಂದಿರುವವರು ಮಂಜುನಾಥ್. ಅದೆಂಥಾದ್ದೇ ಅಡೆತಡೆಗಳು ಬಂದರೂ ಆತ್ಮಸ್ಥೈರ್ಯ ಒಂದಿದ್ದರೆ ಗುರಿ ಸಾಧಿಸಬಹುದೆಂಬುದಕ್ಕೆ ಉದಾಹಣೆಯೆಂಬಂತೆ ಸ್ಟಾರ್ ಕನ್ನಡಿಗ ಚಿತ್ರ ಇದೇ ನವೆಂಬರ್ ಒಂದರಂದು ಬಿಡುಗಡೆಗೆ ತಯಾರಾಗಿದೆ.

ಬೆಂಗಳೂರಿನ ಜಯನಗರದ ಒಡಲಲ್ಲಿರುವ ಸ್ಲಂ ಒಂದರಲ್ಲಿ ಬೆಳೆದ ಮಂಜುನಾಥ್ ಎದೆಯಲ್ಲಿ ಸಿನಿಮಾ ಕನಸು ಮೊಳಕೆಯೊಡೆದದ್ದು ಮತ್ತು ಅವರದನ್ನು ಎಂಥಾ ಸಂಕಷ್ಟಗಳೆದುರಿಗೂ ಮಂಡಿಯೂರದಂತೆ ಸಾಗಿ ಬಂದದ್ದೊಂದು ಕಥೆಯಾದರೆ, ಗುರಿಯ ನೇರಕ್ಕೆ ನಿಂತು ಈ ಸಿನಿಮಾವನ್ನು ರೂಪಿಸಿದ್ದ ಮತ್ತೊಂದು ಸಾಹಸ. ಮಂಜುನಾಥ್‍ಗಿರೋ ಸಿನಿಮಾ ಕನಸು, ಶ್ರದ್ಧೆ ಮತ್ತು ಪ್ರತಿಭೆಗಳನ್ನು ಕಂಡಿದ್ದ ಗೆಳೆಯರೇ ಒಂದಷ್ಟು ಮಂದಿ ಕಾಸು ಹೊಂದಿಸಿ ಈ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿದ್ದರು. ಅಷ್ಟಕ್ಕೂ ಅವರ್ಯಾರೂ ಕೈ ತುಂಬಾ ಕಾಸಿರುವ ಉದ್ಯಮಿಗಳಲ್ಲ. ಅವರೆಲ್ಲರೂ ಹೊಟ್ಟೆಪಾಡಿಗಾಗಿ ಆಟೋ ಡ್ರೈವರ್ ಕೆಲಸ ಮಾಡಿಕೊಂಡಿದ್ದವರು.

ಅಂಥಾ ಎಲ್ಲರೂ ಅಪ್ಪಟ ಸಿನಿಮಾ ಪ್ರೇಮದೊಂದಿಗೇ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು. ಆದರೆ ಅವರು ಹೊಂದಿಸಿದ ಕಾಸು ಕಣ್ಣೆದುರೇ ಕರಗಿ ಹೋಗುತ್ತಿತ್ತು. ಕಡೆ ಕಡೆಗೆ ಈ ಸಿನಿಮಾ ಒಂದು ಸಲ ಹೇಗಾದರೂ ಪೂರ್ತಿಗೊಂಡರೆ ಸಾಕೆಂಬಂಥೆ ಹಪಾಹಪಿಸೋ ಪರಿಸ್ಥಿತಿಯೂ ಬಂದಿತ್ತು. ಕಾಸೆಲ್ಲ ಖಾಲಿಯಾದಾಗ ಚಿತ್ರೀಕರಣ ನಿಲ್ಲಿಸಿ, ನಂತರ ಹೇಗೋ ಹರಸಾಹಸ ಮಾಡಿ ಕಾಸು ಹೊಂದಿಸಿ ಚಿತ್ರೀಕರಣ ಆರಂಭಿಸಿ ಅಂತೂ ಈ ಸಿನಿಮಾ ಮುಗಿಸಿಕೊಂಡಿದ್ದೇ ದೊಡ್ಡ ಸಾಹಸ. ಇಲ್ಲಿ ವ್ಯಾವಹಾರಿಕತೆಗ ಗಂಧ ಗಾಳಿಯೂ ಇಲ್ಲದ ಕಲಾಪ್ರೇಮ ಮಾತ್ರವೇ ಇದ್ದುದರಿಂದಲೇ ಸ್ಟಾರ್ ಕನ್ನಡಿಗ ಭರವಸೆಯ ಚಿತ್ರವಾಗಿ ಬಿಡುಗಡೆಗೆ ಸಿದ್ಧಗೊಂಡಿದೆ.

ಇದು ಕನ್ನಡ ಪ್ರೇಮಿಗಳು ನಿರ್ಮಾಣ ಮಾಡಿರುವ ಅಪ್ಪಟ ಕನ್ನಡ ಪ್ರೇಮ ಹೊಂದಿರೋ ಕಥೆಯ ಚಿತ್ರ. ಇಲ್ಲಿ ಯಾವುದೇ ಥರದ ವಿನಾ ಕಾರಣ ಬಿಲ್ಡಪ್ಪುಗಳ ಹಂಗಿಲ್ಲದೆ ಸಾದಾ ಸೀದಾ ಸ್ವರೂಪದಲ್ಲಿ ಕಥೆ ಹೇಳಲಾಗಿದೆಯಂತೆ. ನಮ್ಮದೇ ಕಥೆಯೆನ್ನಿಸಿ ಅದರಲ್ಲಿಯೇ ಕಳೆದು ಹೋಗಿಸುವಷ್ಟು ಪರಿಣಾಮಕಾರಿಯಾಗಿ ಇಡೀ ಚಿತ್ರ ಮೂಡಿ ಬಂದಿದೆಯಂತೆ. ಇಲ್ಲಿರೋ ಪಾತ್ರಗಳು, ಸನ್ನಿವೇಶಗಳೆಲ್ಲವೂ ನೈಜತೆಗೆ ಹತ್ತಿರಾಗಿರುವಂಥಾದ್ದು. ಇಲ್ಲಿ ನವಿರಾದ ಪ್ರೀತಿಯಿದೆ. ಅದನ್ನುಳಿಸಿಕೊಳ್ಳೋ ಪಾಡಿಪಾಟಲುಗಳೂ ಇವೆ. ಇದೆಲ್ಲದರೊಂದಿಗೆ ಕುಟುಂಬ ಸಮೇತರಾಗಿ ಕೂತು ನೋಡುವಂತೆ ಮೂಡಿ ಬಂದಿರೋ ಈ ಚಿತ್ರ ಇದೇ ನವೆಂಬರ್ ಒಂದರಂದು ತೆರೆಗಾಣಲಿದೆ.

Comments

Leave a Reply

Your email address will not be published. Required fields are marked *