ದುಬಾರಿ ಕಾರಿಗೆ ಒಡತಿಯಾದ ಬುಲ್ ಬುಲ್ ರಚಿತಾ ರಾಮ್ – ಕಾರಿನ ಗುಣವೈಶಿಷ್ಟ್ಯಗಳೇನು?

ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ದುಬಾರಿ ಬೆಲೆಯ ಮರ್ಸಿಡಿಸ್ ಬೆಂಜ್ ಕಾರನ್ನು ಖರೀದಿಸಿದ್ದಾರೆ

ರಚಿತಾ ರಾಮ್ ಅವರು ತನ್ನ ನೆಚ್ಚಿನ ಕಲರ್ ನೀಲಿ ಬಣ್ಣದ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ 350 ಡಿ ಗ್ರ್ಯಾಂಡ್ ಎಡಿಶನ್ ಕಾರನ್ನು ಬರೋಬ್ಬರಿ 1.6 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಹೊಸ ‘ಅತಿಥಿ’ಯನ್ನು ರಚಿತಾ ರಾಮ್ ಕೇಕ್ ಕಟ್ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಬೆಂಗಳೂರಿನ ಸುಂದರಂ ಮೋಟಾರ್ಸ್ ಶೋರೂಮ್‍ನಿಂದ ಈ ಕಾರನ್ನು ಖರೀದಿಸಿದ್ದಾರೆ. ತಮ್ಮ ಶೋ ರೊಂನಲ್ಲಿ ಖರೀದಿಸಿದ ರಚಿತಾ ರಾಮ್ ಅವರಿಗೆ ಶೋರೂಮ್ ಮಾಲೀಕರು ಶಾಲು ಹೊದಿಸಿ ಮೈಸೂರು ಪೇಟ ಹಾಕಿ ಅಭಿನಂದಿಸಿದ್ದಾರೆ. ಈ ವೇಳೆ ರಚಿತಾ ರಾಮ್ ಅವರ ಕೈಯಲ್ಲಿ ಕೇಕ್ ಕಟ್ ಮಾಡಿಸಿ ಕಾರನ್ನು ನೀಡಿದ್ದಾರೆ.

ಕಾರಿನ ವಿಶೇಷತೆಗಳೇನು?
ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ 350 ಡಿ ಗ್ರ್ಯಾಂಡ್ ಎಡಿಶನ್ ಕಾರು ಇದಾಗಿದ್ದು, ಇದರ ಬೆಲೆ ಆನ್‍ರೋಡ್ ಬರೋಬ್ಬರಿ 1.12 ಕೋಟಿ ಇದೆ. ಈ ಕಾರು ಪ್ರತಿ ಲೀಟರ್ ಡೀಸೆಲ್‍ಗೆ 10 ಕಿ.ಮೀ ಮೈಲೇಜ್ ನೀಡುತ್ತದೆ. 2,987 ಸಿಸಿ ಎಂಜಿನ್ ಸಾಮರ್ಥ್ಯ ಇರುವ ಈ ಕಾರು 3,250 ಕೆ.ಜಿ ತೂಕವಿದೆ. ಇದರ ಇಂಜಿನ್ ಅಲ್ಲಿ 6 ಸಿಲಿಂಡರ್ ಗಳನ್ನು ಅಳವಡಿಸಿದ್ದು, 254ಬಿಎಚ್‍ಪಿ ಪವರ್ ಮತ್ತು 620 ಎನ್‍ಎಂ ಟಾರ್ಕ್ ಉತ್ಪಾದಿಸಬಲ್ಲ ಶಕ್ತಿ ಹೊಂದಿದೆ. ಒಟ್ಟು ಏಳು ಜನರು ಒಂದು ವೇಳೆ ಕುಳಿತುಕೊಳ್ಳಬಲ್ಲ ಸೀಟಿನ ವ್ಯವಸ್ಥೆ ಇದೆ.

ಈ ಕಾರಿನ ಉದ್ದ 5130 ಮಿ.ಮೀ.(16.8 ಅಡಿ) ಇದ್ದರೆ ಅಗಲ 1934 ಮಿ.ಮೀ. (6.3 ಅಡಿ) ಇದೆ. ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ 350ಡಿ ಒಟ್ಟು ಎತ್ತರ 1850 ಮಿ.ಮೀ. (6.06 ಅಡಿ) ಇದೆ. ಈ ಕಾರಿನಲ್ಲಿ ಗೇರಿನ ವ್ಯವಸ್ಥೆ ಸ್ವಯಂ ಚಾಲಿತವಾಗಿರಲಿದೆ. ಈ ಕಾರಿನಲ್ಲಿ ಎಬಿಎಸ್ ಸೇರಿದಂತೆ ಹೆಚ್ಚು ಸುರಕ್ಷತೆಯ ಬ್ರೇಕಿಂಗ್ ಸಿಸ್ಟಮ್ ಇದೆ.

ಮೂಲತ ಬೆಂಗಳೂರಿನವರಾದ ರಚಿತಾ ರಾಮ್ ಅವರ ಹೆಸರು ಬಿಂದಿಯಾ ರಾಮ್ ಚಿತ್ರರಂಗಕ್ಕೆ ಬಂದ ನಂತರ ಅವರ ಹೆಸರನ್ನು ರಚಿತಾ ರಾಮ್ ಎಂದು ಇಟ್ಟುಕೊಂಡಿದ್ದಾರೆ. ಖಾಸಗಿ ವಾಹಿನಿಗಳಲ್ಲಿ ಬರುವ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿದ್ದ ರಚಿತಾ 2013 ರಲ್ಲಿ ತೆರೆಕಂಡ ಬುಲ್ ಬುಲ್ ಸಿನಿಮಾದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಜೊತೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದರು. ಇದಾದ ಬಳಿಕ ಚಿತ್ರರಂಗದಲ್ಲಿ ತನ್ನದೇ ಅದ ಹೆಸರು ಮಾಡಿದ ರಚಿತಾ ಡಿಂಪಲ್ ಕ್ವೀನ್ ಆಗಿ ಮಿಂಚುತ್ತಿದ್ದಾರೆ.

ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ರಚಿತಾ ರಾಮ್ ಅವರು, ದರ್ಶನ್, ಸುದೀಪ್, ಗಣೇಶ್, ಶಿವಣ್ಣ, ಪುನಿತ್, ಉಪೇಂದ್ರ ಸೇರಿದಂತೆ ಹಲವಾರು ನಟರ ಜೊತೆ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಥಕ್ ಮತ್ತು ಭರತನಾಟ್ಯ ತರಬೇತಿ ಪಡೆದಿರುವ ರಚಿತಾ ತುಂಬಾ ಒಳ್ಳೆಯ ನೃತ್ಯಗಾರ್ತಿಯಾಗಿದ್ದಾರೆ. ರಚಿತಾ ರಾಮ್ ಮತ್ತು ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್‍ಭವ ಚಿತ್ರ ಇತ್ತೀಚೆಗೆ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ.

Comments

Leave a Reply

Your email address will not be published. Required fields are marked *