ಶುರುವಾಗುತ್ತಿದೆ ಚಡ್ಡಿ ದೋಸ್ತ್, ಕಡ್ಡಿ ಅಲ್ಲಾಡುಸ್ಬುಟ್ಟಾ

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾಗಿದ್ದ ‘ಮನಸಿನ ಮರೆಯಲಿ’ ಎಂಬ ಅಪ್ಪಟ ಪ್ರೇಮಕಥಾ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ‘ಆಸ್ಕರ್ ಕೃಷ್ಣ’ ಈಗ ಇನ್ನೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಳೆದ 6 ತಿಂಗಳಿಂದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದ ಅವರು ಇದೀಗ ಸಂಪೂರ್ಣ ತಯಾರಿಯೊಂದಿಗೆ ಹೊಸ ಚಿತ್ರವನ್ನು ಪ್ರಾರಂಭಿಸುತ್ತಿದ್ದಾರೆ. ಅವರ ಹೊಸ ಚಿತ್ರಕ್ಕೆ ‘ಚಡ್ಡಿ ದೋಸ್ತ್, ಕಡ್ಡಿ ಅಲ್ಲಾಡುಸ್ಬುಟ್ಟಾ’ ಎಂದು ಹೆಸರಿಡಲಾಗಿದೆ.

ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆಯುಳ್ಳ ಈ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಲೋಕೇಂದ್ರ ಸೂರ್ಯ ಕೂಡ ಒಬ್ಬ ನಿರ್ದೇಶಕರಾಗಿದ್ದು, ಇದೇ ವರ್ಷ ತೆರೆ ಕಂಡ ‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಪಡೆದಿತ್ತು.

ಇನ್ನೊಂದು ವಿಶೇಷವೆಂದರೆ ‘ಚಡ್ಡಿ ದೋಸ್ತ್, ಕಡ್ಡಿ ಅಲ್ಲಾಡುಸ್ಬುಟ್ಟಾ’ ಚಿತ್ರದಲ್ಲಿನ ಎರಡು ಪ್ರಮುಖ ಪಾತ್ರಗಳನ್ನು ಆಸ್ಕರ್ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ಅವರೇ ನಿರ್ವಹಿಸುತ್ತಿದ್ದಾರೆ. ಅವು ಎಂತಹ ಪಾತ್ರಗಳು ಎಂಬುದು ಚಿತ್ರ ನೋಡಿದ ಮೇಲೆ ಅರ್ಥವಾಗುತ್ತದಂತೆ. ಈ ಚಿತ್ರದಲ್ಲಿ ಸ್ನೇಹ, ಪ್ರೀತಿ, ರಾಜಕೀಯ, ಅಪರಾಧ ಮತ್ತು ಪೊಲೀಸ್ ವ್ಯವಸ್ಥೆ ಮುಂತಾದ ಅಂಶಗಳು ಹೇಗೆ ಒಂದಕ್ಕೊಂದು ರಿಲೇಟ್ ಆಗಿರುತ್ತವೆ ಎಂಬುದನ್ನು ತೋರಿಸಲಾಗುತ್ತದಂತೆ.

ರಾಕಿನ್ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ ಶಬೀನ ಅರ ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆದಿದ್ದು, ಅತಿ ಶೀಘ್ರದಲ್ಲೇ ಒಳ್ಳೆಯ ಕಲಾವಿದೆಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ ನಿರ್ದೇಶಕ ಆಸ್ಕರ್ ಕೃಷ್ಣ. ಈಗಾಗಲೇ ಹಾಡುಗಳ ರಾಗ ಸಂಯೋಜನೆ ಕಾರ್ಯ ಶುರುವಾಗಿದ್ದು, ಈ ಚಿತ್ರದ ಫಸ್ಟ್ ಲುಕ್ ಅನ್ನು ಶೀಘ್ರದಲ್ಲೇ ಸೆಲೆಬ್ರಿಟಿಯೊಬ್ಬರು ಬಿಡುಗಡೆ ಮಾಡಲಿದ್ದಾರೆ. ಇದೇ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗುತ್ತಿರುವ ಚಡ್ಡಿ ದೋಸ್ತ್, ಕಡ್ಡಿ ಅಲ್ಲಾಡುಸ್ಬುಟ್ಟಾ ಚಿತ್ರಕ್ಕೆ ಅನಂತು ಅವರ ಸಂಗೀತ, ವಿನಯ್ ಗೌಡ ಛಾಯಾಗ್ರಹಣ, ಎ.ಆರ್.ಕೃಷ್ಣಕುಮಾರ್ ಸಂಕಲನ, ವೈಲೆಂಟ್ ವೇಲು ಸಾಹಸ, ಚಂದ್ರಿಕಾ ಹಾಗೂ ಮೈಸೂರು ರಾಜು ಅವರ ನೃತ್ಯ ಸಂಯೋಜನೆಯಿದೆ.

Comments

Leave a Reply

Your email address will not be published. Required fields are marked *