ಬೆಂಗ್ಳೂರು ಮೇಯರ್ ವಿರುದ್ಧ ಸ್ಯಾಂಡಲ್‍ವುಡ್ ನಟಿಮಣಿಯರು ಗರಂ!

ಬೆಂಗಳೂರು: ನಾಯಿಗಳ ವಿಚಾರದಲ್ಲಿ ಮೇಯರ್ ಸಂಪತ್ ರಾಜ್ ವಿರುದ್ಧ ಸ್ಯಾಂಡಲ್ ವುಡ್ ತಾರೆಯರು ಕೆಂಡಕಾರಿದ್ದಾರೆ.

ಸಾಕು ನಾಯಿಗಳಿಗೆ ಲೈಸೆನ್ಸ್ ಹಾಗೂ ಅಪಾರ್ಟ್ ಮೆಂಟ್‍ನಲ್ಲಿ ಸ್ವಂತ ಮನೆಯಲ್ಲಿ ವಾಸಿಸುವರಿಗೆ ಇಷ್ಟೇ ನಾಯಿ ಸಾಕಬೇಕು ಎನ್ನುವ ರೂಲ್ಸ್ ಮಾಡಿರುವ ಬಿಬಿಎಂಪಿ ಮೇಯರ್ ವಿರುದ್ಧ ಐಂದ್ರಿತಾ ರೇ, ಶ್ರುತಿ ಹರಿಹರನ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮೇಯರ್ ಇದೆಂಥ ನಾನ್ ಸೆನ್ಸ್ ಐಡಿಯಾ. ಬೀದಿನಾಯಿಗಳನ್ನು ಸಾಕಲು ಈ ರೀತಿ ಕಠಿಣ ಕಾಯ್ದೆ ತಂದಿರುವುದು ಸರಿಯಲ್ಲ. ಮೊದಲು ಬೀದಿನಾಯಿಗಳ ಸಂತಾನಹರಣ ಕಾರ್ಯಕ್ರಮವನ್ನು ಸರಿಯಾಗಿ ಅನುಷ್ಟಾನಕ್ಕೆ ತನ್ನಿ ಎಂದು ನಟಿಯರು ಟ್ವಿಟ್ಟರ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಶೃತಿ ಹರಿಹರನ್ ಆನ್‍ಲೈನ್ ಪಿಟಿಷನ್ ಹಾಕುವ ಬೆಂಬಲ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಜನರ ಜೊತೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಸದ್ಯ ಕೋರ್ಟ್ ಈ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ಕೂಡ ನೀಡಿದೆ.

ನಿಯಮದಲ್ಲಿ ಏನಿದೆ?
ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ನಾಯಿ ಸಾಕಲು ವಾರ್ಷಿಕ 110 ಪರವಾನಗಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಅಲ್ಲದೆ, ತಪ್ಪದೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಬೇಕು. ಈ ನಿಯಮ ಉಲ್ಲಂಘಿಸಿದರೆ 1 ಸಾವಿರ ದಂಡ ಕಟ್ಟಬೇಕು. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಮುದ್ದಿನ ನಾಯಿಯನ್ನು ಮಾಲೀಕರು ಕಳೆದುಕೊಳ್ಳುವ ಸಾಧ್ಯತೆಯಿದೆ.

ಫ್ಲ್ಯಾಟ್‍ಗಳಲ್ಲಿರುವವರು ಒಂದು ನಾಯಿ, ಮನೆಗಳಲ್ಲಿರುವವರು ಗರಿಷ್ಠ ಮೂರು ನಾಯಿ ಸಾಕಲು ಅವಕಾಶವಿದೆ. ಹೆಚ್ಚು ನಾಯಿ ಸಾಕಿದರೆ, ಬಿಬಿಎಂಪಿ ನೋಟಿಸ್ ಕೊಡಲಿದೆ. ನಿಗದಿತ ಅವಧಿಯೊಳಗೆ ನೋಟಿಸ್‍ಗೆ ಉತ್ತರಿಸಬೇಕು. ನಿಯಮ ಉಲ್ಲಂಘಿಸುವವರ ನಾಯಿಯನ್ನು ವಶಕ್ಕೆ ಪಡೆದು ಬಿಬಿಎಂಪಿಯ ಶ್ವಾನ ಸಂತಾನ ನಿಯಂತ್ರಣ ಕೇಂದ್ರದಲ್ಲಿಟ್ಟು, ಮುಂದೆ ಹರಾಜು ಹಾಕಲಾಗುತ್ತದೆ ಅಥವಾ ಸಾಕುವವರಿಗೆ ಉಚಿತವಾಗಿ ಕೊಡಲಾಗುತ್ತದೆ.

ನಾಯಿಗಳ ಕುತ್ತಿಗೆಗೆ ಪಟ್ಟಿ ಕಟ್ಟಿ ಕಾಲರ್ ಐಡಿ ಹಾಕಬೇಕು. ಈ ಪಟ್ಟಿಯಲ್ಲಿ ನಾಯಿಯ ಆರೋಗ್ಯ, ಲಸಿಕೆ ಕೊಡಿಸಿದ್ದು, ಮಾಲೀಕರ ವಿವರ, ಪರವಾನಗಿ ಸಂಖ್ಯೆ ಮೊದಲಾದ ಮಾಹಿತಿ ಇರಬೇಕು. ಬೀದಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿ ಮೂಲ ಸ್ಥಳದಲ್ಲೇ ವಾಪಸ್ ಬಿಡಲಾಗುತ್ತದೆ. ಒಂದು ವೇಳೆ ನಾಯಿಗಳಿಂದ ತೊಂದರೆ ಆಗಿದ್ದಲ್ಲಿ ಬಿಬಿಎಂಪಿಗೆ ದೂರು ನೀಡಬಹುದು. ಅದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

Comments

Leave a Reply

Your email address will not be published. Required fields are marked *