ಭಾರತ ರತ್ನ ಪುರಸ್ಕೃತ ಸರ್ ಸಿ.ವಿ.ರಾಮನ್ ಮನೆಯಲ್ಲಿ ಶ್ರೀಗಂಧದ ಮರ ಕಳ್ಳತನ

ಬೆಂಗಳೂರು: ಭಾರತ ರತ್ನ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್.ಸಿ.ವಿ.ರಾಮನ್ ಅವರ ಮನೆಯಂಗಳದಲ್ಲಿದ್ದ ಶ್ರೀಗಂಧದ ಮರಗಳನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಪರಾರಿಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಮಲ್ಲೇಶ್ವರಂ 15 ನೇ ಕ್ರಾಸ್‍ನಲ್ಲಿರುವ ವಿಜ್ಞಾನಿ ಸಿ.ವಿ ರಾಮನ್ ಮನೆಯಲ್ಲಿ ಈ ಘಟನೆ ನಡೆದಿದ್ದು, ಮಧ್ಯರಾತ್ರಿ ಸುಮಾರು 3.30 ಕ್ಕೆ ದುಷ್ಕರ್ಮಿಗಳು ಇಬ್ಬರು ಸೆಕ್ಯುರಿಟಿಗಳ ಕುತ್ತಿಗೆಗೆ ಲಾಂಗ್ ಇಟ್ಟು 16 ಅಡಿಯ ಒಂದು ಮರ, 10 ಅಡಿಯ ಶ್ರೀಗಂಧದ ಮರ ಕಳ್ಳತನ ಮಾಡಿದ್ದಾರೆ.

ಸದ್ಯ ಈ ಮನೆ ಸರ್ಕಾರದ ಒಡೆತನದಲ್ಲಿದ್ದು, ಮನೆ ಕಾಯಲು ಇಬ್ಬರು ಗಾರ್ಡ್‍ಗಳನ್ನ ನೇಮಿಸಲಾಗಿತ್ತು. ಆದರೆ ಎರಡು ಓಮಿನಿ ಕಾರಿನಲ್ಲಿ ಬಂದಿದ್ದ ಆರು ಜನರ ತಂಡ, ಲಾಂಗ್ ತೋರಿಸಿ ಹೆದರಿಸಿ ಮರಗಳನ್ನ ಕತ್ತರಿಸಿಕೊಂಡು ಹೋಗಿದ್ದಾರೆ.

ಆರು ಮಂದಿ ಬಂದು, ಮೂವರು ನಮ್ಮ ಮೇಲೆ ಅಟ್ಯಾಕ್ ಮಾಡಿ ಕತ್ತಿಗೆ ಲಾಂಗ್ ಮತ್ತು ಗರಗಸ ಇಟ್ಟು ಕೂರಿಸಿದರು. ನಂತರ ಬಾಯಿ ಬಿಟ್ಟರೆ ಕೊಂದು ಬಿಡುತ್ತೀವಿ ಎಂದು ಹೆದರಿಸಿದ್ರು, ನಂತರ ಒಂದು ಮರ ಕತ್ತರಿಸಿ ಕಾರಿಗೆ ಫೋನ್ ಮಾಡಿ ಕರೆಸಿ ಅದರಲ್ಲಿ ತುಂಬಿ ಕಳಿಸಿದ್ರು, ನಂತರ ಇನ್ನೊಂದು ಮರ ಕತ್ತರಿಸಿ ಕಾರಿಗೆ ತುಂಬಿಕೊಂಡು ಅವರು ಪರಾರಿಯಾದರು ಎಂದು ಇಬ್ಬರು ಸೆಕ್ಯುರಿಟಿಗಳು ತಿಳಿಸಿದರು.

ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು, ಶ್ವಾನದಳ ಭೇಟಿ ನೀಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.


 

Comments

Leave a Reply

Your email address will not be published. Required fields are marked *