ಉಡುಪಿ ಡಿಸಿ ಮೇಲೆ ಕೊಲೆ ಯತ್ನ ನಡೆದ ಮರಳು ಅಡ್ಡೆ ಕಾಂಗ್ರೆಸಿಗರದ್ದು: ರಘುಪತಿ ಭಟ್

ಉಡುಪಿ: ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ, ಎಸಿ ಶಿಲ್ಪಾನಾಗ್ ಸೇರಿದಂತೆ ಏಳು ಮಂದಿಯ ಕೊಲೆ ಯತ್ನ ನಡೆದ ಕುಂದಾಪುರದ ಕಂಡ್ಲೂರು ಮರಳು ಅಡ್ಡೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸೇರಿದ್ದು ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಘುಪತಿ ಭಟ್, ಜಿಲ್ಲಾಪಂಚಾಯತ್‍ನ ಮಾಜಿ ಸದಸ್ಯರೊಬ್ಬರಿಗೆ ಸೇರಿದ ಅಡ್ಡೆಯಿದು. ಸ್ವಜನಪಕ್ಷಪಾತ ಮಾಡುವ ಕಾಂಗ್ರೆಸ್ ಸರ್ಕಾರ, ಅವರ ಹೆಸರು ಬಹಿರಂಗಪಡಿಸುತ್ತಿಲ್ಲ. ಜಿಲ್ಲಾಧಿಕಾರಿಗಳ ಮೇಲೆ 50ಕ್ಕೂ ಹೆಚ್ಚು ಮಂದಿ ಕೊಲೆಗೆ ಯತ್ನ ಮಾಡಿದ್ರೂ, ಕೇವಲ 7 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಕಾರ್ಮಿಕರು, ಮರಳು ಅಡ್ಡೆಯ ಮಾಲೀಕರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕೃಪಾಕಟಾಕ್ಷ ಇದೆ ಎಂದು ಹೇಳಿದರು.

ಸಚಿವರೂ ಅಕ್ರಮ ಮರಳುಗಾರಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಗುಮಾನಿಯಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವಿದೆ. ಜಿಲ್ಲಾಧಿಕಾರಿಗಳ ಕೊಲೆ ಯತ್ನ ನಡೆದರೂ ಉಸ್ತುವಾರಿ ಸಚಿವರು ಘಟನೆ ನಡೆದು ನಾಲ್ಕು ದಿನಗಳಾದರೂ ಜಿಲ್ಲೆಗೆ ಬಂದಿಲ್ಲ. ಅವರಿಗೆ ಉಪಚುನಾವಣೆಯೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.

ಕಳೆದ ನಾಲ್ಕು ವರ್ಷದಿಂದ ಮರಳುಗಾರಿಕೆ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಕಾನೂನು ರೀತಿಯ ಮರಳು ತೆಗೆಯುತ್ತಿದ್ದದ್ದಕ್ಕೆ ಸಚಿವರ ಕಡೆಯ ಜನರಿಂದಲೇ ಕಾನೂನು ಹೋರಾಟ ಮಾಡಿಸಿ ಹಸಿರು ಪೀಠದಿಂದ ತಡೆ ತರಿಸಿದ್ದಾರೆ. ಇನ್ನೊಂದು ಕಡೆಯಿಂದ ಕಾಂಗ್ರೆಸ್ ಪಕ್ಷದವರೇ ಮರಳುಗಾರಿಕೆ ಮಾಡುತ್ತಿದ್ದಾರೆ. ಅದಕ್ಕೆ ಸಚಿವರ ಬೆಂಬಲವಿದೆ. ಇಂತಹ ಗೊಂದಲದಿಂದಲೇ ಜಿಲ್ಲಾಧಿಕಾರಿಗಳ ಮೇಲೆ ಕೊಲೆಯತ್ನ ಮಾಡಲಾಗಿದೆ. ಗ್ರಾಮಲೆಕ್ಕಾಧಿಕಾರಿ ಅವರನ್ನು ಮನಬಂದಂತೆ ಹೊಡೆದು ನೀರಿಗೆ ಬಿಸಾಕಿದ್ದಾರೆ. ಇಷ್ಟೆಲ್ಲಾ ಆದ್ರೂ ಸರಿಯಾದ ಕ್ರಮ ಆಗ್ತಾಯಿಲ್ಲ ಎಂದು ರಘುಪತಿ ಭಟ್ ಆರೋಪಿಸಿದರು.

Comments

Leave a Reply

Your email address will not be published. Required fields are marked *