ರೈತರಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಕೆರೆಯಲ್ಲಿ ಅಕ್ರಮ ಮರಳುಗಾರಿಕೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಇತ್ತೀಚೆಗೆ ಅಕ್ರಮದ್ದೇ ಸದ್ದು ಹೆಚ್ಚಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ಜೊತೆಗೆ ಫಿಲ್ಟರ್ ಮರಳು ದಂಧೆ ಕೂಡ ನಡೆಯುತ್ತಿದೆ. ಊರಿನ ರೈತರ ಅನುಕೂಲಕ್ಕಾಗಿ ನಿರ್ಮಿಸಿರುವ ಕೆರೆಯಲ್ಲಿ ಪ್ರಭಾವಿ ಮಹಾನುಭಾವನೊಬ್ಬ ಮರಳು ಮಾಫಿಯಾ ನಡೆಸುತ್ತಿದ್ದಾನೆ.

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿರುವ ಕಿರಬನಕಟ್ಟೆ ಕೆರೆ ಬಳಿ ಹಲವು ವರ್ಷಗಳಿಂದ ಮರಳು ಫಿಲ್ಟರ್ ದಂಧೆ ನಡೆಸಲಾಗುತ್ತಿದೆ. ಗ್ರಾಮದ ತಮ್ಮೇಗೌಡರು ಮತ್ತವರ ಮಕ್ಕಳಾದ ಅವಿನಾಶ್ ಹಾಗೂ ಆನಂದ್ ಈ ದಂಧೆ ನಡೆಸುತ್ತಿದ್ದಾರಂತೆ. ಕೆರೆ ಪಕ್ಕದ ತಮ್ಮ ಜಮೀನಿಗೆ ಹೊರಗಡೆಯಿಂದ ಲೋಡ್ ಗಟ್ಟಲೇ ಮಣ್ಣನ್ನು ತಂದು ಶೇಖರಣೆ ಮಾಡಿಕೊಂಡು ಕೆರೆಯೊಳಗೆ ಗುಂಡಿ ನಿರ್ಮಿಸಿ, ಫಿಲ್ಟರ್ ಮಾಡಿ ನಿತ್ಯ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮರಳನ್ನು ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರಗಳಿಗೆ ರವಾನಿಸುವ ಮೂಲಕ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ಇದನ್ನೂ ಓದಿ: ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

ಮಣ್ಣಿನ ರಾಶಿಯನ್ನು ಮರಳಾಗಿ ಪರಿವರ್ತಿಸಿ ಮಾರಾಟ ಮಾಡ್ತಿರುವ ದಂಧೆ ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿಗೂ ನಡೆಯುತ್ತಿದೆ. ಈ ದಂಧೆ ಕಾನೂನು ಬಾಹಿರವಾಗಿದ್ದು, ಫಿಲ್ಟರ್ ಮರಳಿನಿಂದ ನಿರ್ಮಿಸುವ ಮನೆ ತನ್ನ ಆಯಸ್ಸು ಕಳೆದುಕೊಳ್ಳುವ ಜೊತೆಗೆ ಕೆಲವೇ ವರ್ಷಗಳಲ್ಲಿ ಶಿಥಿಲವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೆ ಈ ದಂಧೆಯಿಂದಾಗಿ ಕೆರೆಯಲ್ಲಿ ಹೂಳು ತುಂಬಿಕೊಳ್ಳುತ್ತಿದ್ದು, ಕೆರೆಯ ನೀರನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ರೈತರಿಗೆ ತೊಂದರೆಯಾಗುತ್ತಿದೆ. ಆದರೆ ದಂಧೆಕೋರರಿಗೆ ಹೆದರಿ ಗ್ರಾಮಸ್ಥರು ವಿರೋಧ ಮಾಡುತ್ತಿಲ್ಲ. ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪೇಟೆ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ 25 ಲೋಡ್ ಮರಳು ಹಾಗೂ ಮಣ್ಣನ್ನು ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *