ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಬಲಪಂಥೀಯ ನಾಯಕಿ ಸನೆ ತಾಕೈಚಿ ಆಯ್ಕೆ

ಟೋಕಿಯೊ: ಜಪಾನ್ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಯೊಬ್ಬರು ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ಬಲಪಂಥೀಯ ನಾಯಕಿ ಸನೆ ತಾಕೈಚಿ (Sanae Takaichi) ಜಪಾನಿನ (Japan) ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಆಡಳಿತರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ (LDP) ಕಟ್ಟಾ ಸಂಪ್ರದಾಯವಾದಿಯಾಗಿರುವ 64 ವರ್ಷದ ಸನೆ ತಾಕೈಚಿ ಅವರನ್ನು ಪ್ರಧಾನಿಯನ್ನಾಗಿ ಸಂಸತ್ತು ಆಯ್ಕೆ ಮಾಡಿದೆ.

ಶಿಂಜೊ ಅಬೆ ಅವರ ಶಿಷ್ಯೆಯಾಗಿದ್ದ ತಕೈಚಿ, ಅಬೆ ಅವರ ಪ್ರಧಾನಿ ಅವಧಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಅಕ್ಟೋಬರ್‌ 4ರಂದು ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸನೆ ತಾಕೈಚಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ದೇಶದ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯ್ಚುಮಿ ಅವರ ಪುತ್ರ ಹಾಗೂ ಕೃಷಿ ಸಚಿವ ಶಿಂಜಿರೊ ಕೊಯ್ಚುಮಿ ಅವರನ್ನು ಸನೆ ಸೋಲಿಸಿದ್ದರು.

ಜಪಾನ್ ಮೊದಲು ವಿದೇಶಾಂಗ ನೀತಿಯನ್ನು ಪ್ರತಿಪಾದಿಸುತ್ತಿರುವ ಇವರು ಅಮೆರಿಕದ ವ್ಯಾಪಾರ ನಿಯಮಗಳನ್ನು ಟೀಕಿಸಿದ್ದರು. ತೈವಾನ್ ಪರ ಒಲವು ಹೊಂದಿರುವ ಇವರು ಚೀನಾದ ಗಿಡುಗ ಎಂದು ಪ್ರಖ್ಯಾತಿ ಪಡೆದಿದ್ದಾರೆ.

ತಮ್ಮ ಪ್ರಚಾರ ಭಾಷಣದಲ್ಲಿ ಇಸ್ಲಾಮಿಸ್ಟ್‌ಗಳು ಅಥವಾ ಅಕ್ರಮ ವಲಸಿಗರನ್ನು ಜಪಾನ್‌ ಸ್ವೀಕರಿಸುವುದಿಲ್ಲ. ಜಪಾನ್‌ ದೇಶವಾಗಿ ಉಳಿಯಬೇಕಾದರೆ ನಕಲಿ ನಿರಾಶ್ರಿತರನ್ನು ಹೊರಗೆ ಕಳುಹಿಸಬೇಕು ಗುಡುಗಿದ್ದರು.

ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸನೆ ತಾಕೈಚಿ ದೂರದರ್ಶನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಸಲಿಂಗ ವಿವಾಹ ಮತ್ತು ವಿವಾಹಿತ ದಂಪತಿಗಳಿಗೆ ಪ್ರತ್ಯೇಕ ಉಪನಾಮಗಳನ್ನು ನೀಡುವುದಕ್ಕೆ ದೀರ್ಘಕಾಲೀನ ವಿರೋಧಿಯಾಗಿದ್ದಾರೆ.

ಸನೆ ತಾಕೈಚಿ ಅಯ್ಕೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.