ಬಾಡಿ ಸ್ಕ್ಯಾನರ್ ಚೆಕ್ಕಿಂಗ್ ಇದ್ರೂ 8,474 ಫೋನ್‍ಗಳನ್ನು ಕದ್ದಿದ್ದ ಸ್ಯಾಮ್‍ಸಂಗ್ ಉದ್ಯೋಗಿ ಕೊನೆಗೂ ಅರೆಸ್ಟ್

ಸಿಯೋಲ್: ವಿಶ್ವದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿ ಸ್ಯಾಮ್‍ಸಂಗ್‍ನ ಉದ್ಯೋಗಿಯೊಬ್ಬ ಬರೋಬ್ಬರಿ 8,474 ಫೋನ್‍ಗಳನ್ನು ಕದ್ದು ಸಿಕ್ಕಿಬಿದ್ದಿದ್ದಾನೆ.

ದಕ್ಷಿಣ ಕೊರಿಯಾದ ಸ್ಯಾಮ್‍ಸಂಗ್‍ನ ಮುಖ್ಯ ಕೇಂದ್ರ ಕಚೇರಿ ಸುವಾನ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೀ ಎಂಬಾತನನ್ನು ಪೊಲೀಸರು ಈಗ ಬಂಧಿಸಿದ್ದಾರೆ.

2014ರ ಡಿಸೆಂಬರ್ ನಿಂದ 2016ರ ನವೆಂಬರ್‍ವರೆಗೆ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈತ ಫೋನ್‍ಗಳನ್ನು ಕದ್ದಿದ್ದ.

ಕದ್ದಿದ್ದು ಹೇಗೆ?
2010ರಲ್ಲಿ ಸ್ಯಾಮ್‍ಸಂಗ್ ಹಳೆಯ ಫೋನ್ ಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ವಿಕಲಚೇತನರಿಗೆ ಉದ್ಯೋಗ ನೀಡುವ ಆಫರ್ ಪ್ರಕಟಿಸಿತ್ತು. ಈ ಆಫರ್ ಅಡಿಯಲ್ಲಿ ಲೀಗೆ ಉದ್ಯೋಗ ಸಿಕ್ಕಿತ್ತು.

ಸ್ಯಾಮ್‍ಸಂಗ್ ಕಂಪೆನಿಯ ಎಲ್ಲ ಉದ್ಯೋಗಿಗಳು ಕಚೇರಿಯಿಂದ ಹೊರ ಹೋಗುವಾಗ ಬಾಡಿ ಸ್ಕ್ಯಾನರ್ ಮೂಲಕವೇ ನಿರ್ಗಮಿಸುತ್ತಿದ್ದರು. ಆದರ ಲೀ ಎಲೆಕ್ಟ್ರಾನಿಕ್ ವೀಲ್ ಚೇರ್ ಮೂಲಕ ಸಂಚರಿಸುತ್ತಿದ್ದ ಕಾರಣ ಆತನಿಗೆ ಈ ಭದ್ರತಾ ತಪಾಸಣೆಯಿಂದ ವಿನಾಯಿತಿ ಸಿಕ್ಕಿತ್ತು.

ಈ ವಿನಾಯಿತಿಯನ್ನು ದುರುಪಯೋಗ ಪಡಿಸಿಕೊಂಡಿದ್ದ ಲೀ ತನ್ನ ವೀಲ್ ಚೇರ್ ಅಡಿಯಲ್ಲಿ ಫೋನ್ ಗಳನ್ನು ಇರಿಸಿ ಮನೆಗೆ ತೆರಳುತ್ತಿದ್ದ. 8 ಸಾವಿರಕ್ಕೂ ಅಧಿಕ ಫೋನ್‍ಗಳನ್ನು ಕದ್ದಿದ್ದ ಈತ ಒಟ್ಟು 7.11 ಲಕ್ಷ ಡಾಲರ್(ಅಂದಾಜು 4.57 ಕೋಟಿ ರೂ.) ಪಡೆದು ಸೆಕೆಂಡ್ ಹ್ಯಾಂಡ್ ಡೀಲರ್ ಗಳಿಗೆ ಮಾರಾಟ ಮಾಡಿದ್ದ.

ಕಂಪೆನಿಗೆ ಗೊತ್ತಾಗಿದ್ದು ಹೇಗೆ?
ವಿಯೆಟ್ನಾಂನಲ್ಲಿ ‘ನಾಟ್ ಫಾರ್ ಸೇಲ್’ ಬ್ಯಾಟರಿ ಹೊಂದಿದ್ದ ಸ್ಮಾರ್ಟ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಯಾಮ್‍ಸಂಗ್ 2016ರ ಡಿಸೆಂಬರ್‍ನಲ್ಲಿ ಪೊಲೀಸ್ ದೂರು ನೀಡಿತ್ತು.

ಜೂನ್ 7ರಂದು ದಕ್ಷಿಣ ಕೊರಿಯಾ ಪೊಲೀಸರು ಕಳ್ಳತನ ಮತ್ತು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೀಯನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ. ಸ್ಮಾರ್ಟ್ ಫೋನ್‍ನಿಂದ ಮಾರಾಟ ಮಾಡಿದ ಹಣವನ್ನು ಲೀ ಜೂಜಿಗೆ ಬಳಕೆ ಮಾಡುತ್ತಿದ್ದ.

Comments

Leave a Reply

Your email address will not be published. Required fields are marked *