IND vs SA: ಸಂಜು ಸ್ಯಾಮ್ಸನ್ ಮೊದಲ ಶತಕ; ಆಫ್ರಿಕಾಗೆ 297 ರನ್‌ಗಳ ಗುರಿ

ಪಾರ್ಲ್‌ (ದಕ್ಷಿಣ ಆಫ್ರಿಕಾ): ಗುರುವಾರ ಪಾರ್ಲ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಚೊಚ್ಚಲ ODI ಶತಕ ಮತ್ತು ತಿಲಕ್ ವರ್ಮಾ ಅವರ ಅರ್ಧಶತಕವು, ಭಾರತ ಸವಾಲಿನ ಮೊತ್ತ 296/8 ದಾಖಲಿಸಲು ನೆರವಾಯಿತು.

ಏಕದಿನ ಕ್ರಿಕೆಟ್‌ ಸರಣಿಯ ಕೊನೆ ಪಂದ್ಯದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡವು ಉತ್ತಮ ಇನ್ನಿಂಗ್ಸ್‌ ಕಟ್ಟಲು ಆರಂಭಿಸಿತು. ಆರಂಭಿಕರಾಗಿ ಫೀಲ್ಡಿಗಿಳಿದಿದ್ದ ರಜತ್ ಪಾಟಿದಾರ್ ಮತ್ತು ಸಾಯಿ ಸುದರ್ಶನ್ ಉತ್ತಮ ಜೊತೆಯಾಟಕ್ಕೆ ಮುಂದಾದರು. ಆದರೆ ಪಾಟಿದಾರ್‌ ಹೆಚ್ಚು ಹೊತ್ತು ನಿಲ್ಲಲಿಲ್ಲ. 16 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 22 ರನ್ ಗಳಿಸಿ ಪಾಟಿದಾರ್ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ಸಾಯಿ ಸುದರ್ಶನ್ ಕೇವಲ 10 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಭಾರತ 7.3 ಓವರ್‌ಗಳಲ್ಲಿ 49 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತು.

ಈ ವೇಳೆ ಜೊತೆಯಾದ ಕೆ.ಎಲ್‌.ರಾಹುಲ್‌ ಮತ್ತು ಸಂಜು ಸ್ಯಾಮ್ಸನ್‌ ಜವಾಬ್ದಾರಿಯುತ ಆಟವಾಡಿದರು. 68 ಬಾಲ್‌ಗಳಿಗೆ 52 ರನ್‌ಗಳಿಸಿ ಉತ್ತಮ ಜೊತೆಯಾಟ ಆಡಿದರು. ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಕೆ.ಎಲ್‌.ರಾಹುಲ್‌ ಕ್ಯಾಚ್‌ ನೀಡಿ (35 ಬಾಲ್‌ 21 ರನ್‌) ಔಟಾದರು. ಆಗ ಸಂಜುಗೆ ತಿಲಕ್‌ ವರ್ಮಾ ಜೊತೆಯಾಗಿ ಹರಿಣರನ್ನು ಚೆಂಡಾಡಿದರು. ಈ ಜೋಡಿ 136 ಬಾಲ್‌ಗಳಿಗೆ 166 ರನ್‌ಗಳ ಉತ್ತಮ ಜೊತೆಯಾಟ ಆಡಿತು.

ತಿಲಕ್‌ ವರ್ಮಾ ಅರ್ಧಶತಕ ಗಳಿಸಿ (52 ರನ್‌, 77 ಬಾಲ್‌, 5 ಫೋರ್‌, 1 ಸಿಕ್ಸ್‌) ಜವಾಬ್ದಾರಿಯುತ ಆಟವಾಡಿದರು. ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್‌ ಇತ್ತು ಹೊರನಡೆದರು. ಸಂಜು ಸ್ಯಾಮ್ಸನ್‌ ಉತ್ತಮ ಪ್ರದರ್ಶನದಿಂದ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದರು. 114 ಬಾಲ್‌ಗಳಿಗೆ 108 (6 ಫೋರ್‌, 3 ಸಿಕ್ಸ್‌) ಸಿಡಿಸಿದರು. ರಿಂಕು ಸಿಂಗ್‌ ಕೂಡ (38 ರನ್‌, 27 ಬಾಲ್‌, 3 ಫೋರ್‌, 2 ಸಿಕ್ಸ್‌) ಅಬ್ಬರದ ಬ್ಯಾಟಿಂಗ್‌ ನಡೆಸಿದರು. ಅಕ್ಷರ್‌ ಪಟೇಲ್‌ 1, ವಾಷಿಂಗ್ಟನ್‌ ಸುಂದರ್‌ 14, ಔಟಾಗದೇ ಅರ್ಷದೀಪ್‌ ಸಿಂಗ್‌ 7 ಹಾಗೂ ಅವೇಶ್‌ ಖಾನ್‌ 1 ರನ್‌ ಗಳಿಸಿದರು. ಭಾರತ ತಂಡ 8 ವಿಕೆಟ್‌ ನಷ್ಟಕ್ಕೆ 50 ಓವರ್‌ಗಳಲ್ಲಿ 296 ಸವಾಲಿನ ಮೊತ್ತ ಪೇರಿಸಿತು. ಆ ಮೂಲಕ ಆಫ್ರಿಕಾಗೆ 297 ರನ್‌ ಗುರಿ ನೀಡಿದೆ.

ಆಫ್ರಿಕಾ ಪರ ಬ್ಯೂರಾನ್ ಹೆಂಡ್ರಿಕ್ಸ್ 3 ವಿಕೆಟ್‌ ಕಿತ್ತು ಮಿಂಚಿದರು. ನಾಂದ್ರೆ ಬರ್ಗರ್ 2, ಲಿಜಾಡ್ ವಿಲಿಯಮ್ಸ್, ವಿಯಾನ್ ಮುಲ್ಡರ್, ಕೇಶವ ಮಹಾರಾಜ್ ತಲಾ 1 ವಿಕೆಟ್‌ ಕಿತ್ತರು.