‘ಕೆರೆಬೇಟೆ’ಗಾಗಿ ಖಾಕಿ ತೊಟ್ಟ ಸಂಪತ್ ಮೈತ್ರೇಯ

ಸಿನಿಮಾ ಜಗತ್ತಿನಲ್ಲಿ ಬಹುಬೇಗನೆ ಅವಕಾಶ ಗಿಟ್ಟಿಸಿಕೊಂಡು, ಪ್ರಸಿದ್ಧಿ ಪಡೆಯಬೇಕೆಂಬ ಹಂಬಲ ಹೊತ್ತು ನೂಕುನುಗ್ಗಲಿನಲ್ಲಿ ನಿಂತವರು ಯಥೇಚ್ಚವಾಗಿ ಕಾಣಸಿಗುತ್ತಾರೆ. ಅಂಥಾ ಜಂಗುಳಿಯ ಇಕ್ಕೆಲದಲ್ಲಿ ತಮ್ಮದೇ ಆದ ಗುರಿ, ಗುಣಮಟ್ಟ ಕಾಯ್ದುಕೊಂಡ ಮತ್ತೊಂದು ಸಣ್ಣ ಗುಂಪೂ ಕಾಣ ಸಿಗುತ್ತದೆ. ಅದು ಯಾವ ಪಾತ್ರಕ್ಕಾದರೂ ಸೈ ಎಂಬ ನಟನಾ ಚಾತುರ್ಯವಿರುವವರ ಬಳಗ. ಸದ್ಯದ ಮಟ್ಟಿಗೆ ಆ ಬಳಗದ ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮಿರುವವರು ಸಂಪತ್ ಮೈತ್ರೇಯ (Sampath Maitreya). ರಂಗಭೂಮಿಯನ್ನೇ ಉಸಿರಾಗಿಸಿಕೊಂಡು, ಸಾಮಾಜಿಕ ಸ್ಥಿತ್ಯಂತರಗಳಿಗೆ ರಂಗದ ಮೂಲಕ ಕಣ್ಣಾಗುತ್ತಾ ಬಂದಿರುವ ಸಂಪತ್ ಮೈತ್ರೇಯ, ಗೌರಿಶಂಕರ್ ನಾಯಕನಾಗಿ ನಟಿಸಿರುವ `ಕೆರೆಬೇಟೆ’ (Kerebete) ಚಿತ್ರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ನಟಿಸಿದ್ದಾರೆ.

ಈವತ್ತಿಗೂ ರಂಗಭೂಮಿಯನ್ನೇ ಮೊದಲ ಆದ್ಯತೆಯಾಗಿಸಿಕೊಂಡಿರುವ ಸಂಪತ್ ಮೈತ್ರೇಯ, ಕಿರುತೆರೆ, ಹಿರಿತೆರೆ ಪ್ರೇಕ್ಷಕರೆಲ್ಲರಿಗೂ ಚಿರಪರಿಚಿತರು. ಸಿನಿಮಾ ವಿಚಾರಕ್ಕೆ ಬಂದರೆ, ಅಲ್ಲಿಯೂ ಪ್ರಯೋಗಾತ್ಮಕ ಚಿತ್ರಗಳಿಗೆ, ಪಾತ್ರಗಳಿಗೆ ಮಾತ್ರವೇ ಅವರು ಮೊದಲ ಆದ್ಯತೆ ಕೊಡುತ್ತಾ ಸಾಗಿ ಬಂದಿದ್ದಾರೆ. ಕೆರೆಬೇಟೆಯಲ್ಲಿ ಬಲು ಮಹತ್ವ ಹೊಂದಿರೋ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರಕ್ಕೆ ಕಲಾವಿದರ ಅನ್ವೇಷಣೆಯಲ್ಲಿದ್ದಾಗ ಗೌರಿಶಂಕರ್ (Gowrishankar) ಮತ್ತು ನಿರ್ದೇಶಕ ರಾಜಗುರು ಅವರ ಪ್ರಧಾನ ಆಯ್ಕೆಯಾಗಿದ್ದದ್ದು ಸಂಪತ್ ಮೈತ್ರೇಯ. ಇಂಥಾದ್ದೊಂದು ಆಫರ್ ಬಂದಾಗ, ನೆಲದ ಘಮಲಿನ ಕಥೆ, ಆ ಪಾತ್ರದ ಖದರ್ ಕಂಡು ಖುಷಿಯಾಗಿಯೇ ನಟಿಸಲು ಒಪ್ಪಿಕೊಂಡಿದ್ದರಂತೆ.

ಕೆರೆಬೇಟೆ ಮಲೆನಾಡು ಭಾಗದ ಕಥೆ ಹೊಂದಿರುವ ಚಿತ್ರ. ಈಗ ಕಾಣಿಸಿರುವಂತೆ ಪ್ರೀತಿಯ ಸುತ್ತ ಮಾತ್ರವೇ ಸುತ್ತುತ್ತದೆ ಅಂದುಕೊಳ್ಳುವಂತಿಲ್ಲ. ಮಲೆನಾಡು ಭಾಗದ ಜನಜೀವನ, ಸಂಸ್ಕøತಿ, ಬದುಕಿನ ಕ್ರಮ, ರಾಜಕೀಯ, ಸಿಟ್ಟು, ದ್ವೇಷ ಸೇರಿದಂತೆ ಅಂದಾಜಿಗೆ ನಿಲುಕದ ಅದೆಷ್ಟೋ ಅಂಶಗಳಿಂದ ಈ ಸಿನಿಮಾ ರೂಪುಗೊಂಡಿದೆ. ಅದರಲ್ಲಿ ಅತ್ಯಂತ ಮಹತ್ವದ ತನಿಖಾಧಿಕಾರಿಯ ಪಾತ್ರವನ್ನು ಸಂಪತ್ ನಿರ್ವಹಿಸಿದ್ದಾರೆ. ಒಟ್ಟಾರೆ ಕಥೆ, ಅದಕ್ಕೆ ದೃಷ್ಯ ರೂಪ ನೀಡಿರುವ ರೀತಿ ಮತ್ತು ಚಿತ್ರತಂಡದ ಅತೀವ ಸಿನಿಮಾ ಪ್ರೀತಿಯ ಬಗ್ಗೆ ಸಂಪತ್ ಅವರಲ್ಲೊಂದು ಬೆರಗಿದೆ. ಅವರೇ ಖುದ್ದಾಗಿ ಹೇಳಿಕೊಂಡಿರುವ ಒಂದಷ್ಟು ಮಾಹಿತಿಗಳನ್ನು ಆಧರಿಸಿ ಹೇಳೋದಾದರೆ, ಕೆರೆಬೇಟೆ ಅಪರೂಪದ ಗೆಲುವಿನ ರೂವಾರಿಯಾಗೋ ಲಕ್ಷಣಗಳು ದಟ್ಟವಾಗಿವೆ.

 

ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.