ತಾಯಿಯಾಗ್ತಿದ್ದಾರಾ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ?

ಹೈದರಾಬಾದ್: ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಇದೀಗ ಎಲ್ಲ ಚಿತ್ರಗಳಿಂದಲೂ ದೂರ ಉಳಿಯುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಶೂಟಿಂಗ್ ಪ್ರಾರಂಭವಾಗಿದ್ದ ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರದಿಂದಲೂ ಸಮಂತ ಹೊರಗೆ ಬಂದಿದ್ದಾರೆ. ಇದರಿಂದಾಗಿ ಅಭಿಮಾನಿಗಳಿಗೆ ಕುತೂಹಲ ಉಂಟಾಗಿದೆ. ಚಿತ್ರಗಳಿಂದ ಯಾಕೆ ದೂರ ಉಳಿಯುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.

ಇದಕ್ಕೆ ಕಾರಣವೂ ಇದ್ದು, ಸಮಂತಾ ಅವರು ಖುಷಿ ವಿಚಾರವನ್ನು ಹೇಳುತ್ತಾರೆ ಎಂಬ ಮಾತು ಸಹ ಕೇಳಿಬರುತ್ತಿದೆ. ಅದೇನಪ್ಪಾ ಖುಷಿ ವಿಚಾರ ಅಂತೀರಾ, ಅದೇ ಅವರು ತಾಯಿಯಾಗುವುದು. ಹೌದು ತಮಿಳಿನ ವಿಘ್ನೇಶ್ ಶಿವನ್ ನಿರ್ದೇಶನದ ಹೊಸ ಚಿತ್ರ `ಕಾತುವಾಕುಲ ರೆಂಡು ಕಾದಲ್’ ಚಿತ್ರದ ಶೂಟಿಂಗ್‍ನಲ್ಲಿ ಸಮಂತಾ ತೊಡಗಿದ್ದರು. ಆದರೆ ಇದ್ದಕ್ಕಿದ್ದಂತೆ ಚಿತ್ರದಿಂದ ಹೊರ ಬಂದಿದ್ದಾರೆ.

ಈ ಬೆಳವಣಿಗೆ ಬಳಿಕ ಯಾಕೆ ಸಿನಿಮಾದಿಂದ ಹೊರ ಬಂದರು ಎಂಬುದು ಅಧೀಕೃತವಾಗಿರಲಿಲ್ಲ. ಆದರೆ ಮೂಲಗಳ ಪ್ರಕಾರ ಸಮಂತಾ ಅವರೇ ಚಿತ್ರದಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಮಾತ್ರಲ್ಲದೆ ಈ ವರ್ಷ ಅವರು ಯಾವುದೇ ಸಿನಿಮಾಗೆ ಸಹಿ ಹಾಕಿಲ್ಲ. ಸಮಂತಾ ಗರ್ಭಿಣಿಯಾಗಿದ್ದಾರೆ, ಹೀಗಾಗಿಯೇ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಚೆನ್ನೈನಲ್ಲಿ ವಿಘ್ನೇಶ್ ಅವರ ಕಚೇರಿಗೆ ಭೇಟಿ ನೀಡಿದ್ದ ಅವರು, ಹೊಸ ಚಿತ್ರದಿಂದ ಹೊರ ನಡೆಯುತ್ತಿರುವುದಕ್ಕೆ ನಿರ್ದೇಶಕರ ಬಳಿ ಕ್ಷಮೆ ಕೋರಿದ್ದಾರೆ. ಜೊತೆಗೆ ತಾವು ನಿರ್ವಹಿಸಬೇಕಿದ್ದ ಪಾತ್ರಕ್ಕೆ ಕೆಲವು ನಟಿಯರ ಹೆಸರನ್ನೂ ಸಮಂತಾ ಸೂಚಿಸಿದ್ದಾರಂತೆ.

ನಟ ವಿಜಯ್ ಸೇತುಪತಿ ನಾಯಕರಾಗಿರುವ `ಕಾತುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಯನತಾರಾ ಮತ್ತು ಸಮಂತಾ ನಟಿಸಲಿದ್ದಾರೆ ಎಂದು ಪ್ರೇಮಿಗಳ ದಿನ ನಿರ್ದೇಶಕರೇ ಘೋಷಿಸಿದ್ದರು. ಒಂದೇ ಸಿನಿಮಾದಲ್ಲಿ ಇಬ್ಬರು ಖ್ಯಾತ ನಟಿಯರು ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದರು. ಆದರೆ ಸಮಂತಾ ದಿಢೀರನೇ ಈ ಚಿತ್ರದಿಂದ ಹೊರಬಂದಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಕೌಟುಂಬಿಕ ಜೀವನದತ್ತ ಹೆಚ್ಚು ಒತ್ತು ನೀಡಲು ಸಮಂತಾ ಈ ನಿರ್ಧಾರ ತಳೆದಿರಬಹುದು ಎನ್ನಲಾಗಿದೆ. ಸಮಂತಾ 2017ರ ಅಕ್ಟೋಬರ್‍ನಲ್ಲಿ ನಟ ನಾಗಚೈತನ್ಯ ಜೊತೆಗೆ ಗೋವಾದಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಎರಡು ವರ್ಷ ಕಳೆದರೂ ತಾಯಿಯಾಗುವ ಕುರಿತು ಸುಳಿವು ನೀಡಿಲ್ಲ. `ಸಮಂತಾ ತಾಯ್ತನದ ಸುಖ ಅನುಭವಿಸುವುದು ಯಾವಾಗ?’ ಎಂದು ಕಳೆದ ವರ್ಷ ಅವರ ಅಭಿಮಾನಿಗಳು ಪ್ರಶ್ನಿಸಿದ್ದರು. ನಂತರ ಈ ಕುರಿತು ಉತ್ತರಿಸಿದ್ದ ಸಮಂತಾ, `2022ರ ಆಗಸ್ಟ್ 7ರಂದು ಬೆಳಿಗ್ಗೆ 7ಗಂಟೆಗೆ ನನ್ನ ಮಗುವಿಗೆ ತಾಯಿಯಾಗುತ್ತೇನೆ’ ಎಂದು ದಿನಾಂಕವನ್ನೇ ಘೋಷಿಸಿದ್ದರು. ಈ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದರು.

Comments

Leave a Reply

Your email address will not be published. Required fields are marked *