ಸುದೀಪ್‍ಗೆ ದುಬಾರಿ BMW M5 ಕಾರು ಗಿಫ್ಟ್ ಕೊಟ್ಟ ಸಲ್ಮಾನ್

ಬೆಂಗಳೂರು: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಕಿಚ್ಚ ಸುದೀಪ್ ಅವರಿಗೆ ಬಿಎಂಡಬ್ಯ್ಲೂ ಎಂ5 ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

ಸುದೀಪ್ ಅವರ ಮನೆಗೆ ಸ್ವತಃ ಸಲ್ಮಾನ್ ಖಾನ್ ಅವರೇ ಈ ಕಾರನ್ನು ತಂದುಕೊಟ್ಟಿದ್ದಾರೆ. ಸದ್ಯ ಸುದೀಪ್ ತಮ್ಮ ತಂದೆ ಹಾಗೂ ಸಲ್ಮಾನ್ ಖಾನ್ ಜೊತೆಗಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಕಾರಿನ ಶೋ ರೂಂ ಬೆಲೆ ಬರೋಬ್ಬರಿ ಒಂದೂವರೆ ಕೋಟಿ ಇದೆ.

ಟ್ವಿಟ್ಟರಿನಲ್ಲಿ ಫೋಟೋ ಹಾಕಿ ಸುದೀಪ್ ಅದಕ್ಕೆ, ನೀವು ಒಳ್ಳೆಯದನ್ನು ಮಾಡಿದಾಗ ನಿಮಗೆ ಒಳ್ಳೆಯದೇ ಆಗುತ್ತದೆ. ಸಲ್ಮಾನ್ ಖಾನ್ ಅವರು ಬಿಎಂಡಬ್ಯ್ಲೂ ಎಂ5 ಜೊತೆ ಮನೆಗೆ ಬಂದು ಸರ್ಪ್ರೈಸ್ ಕೊಡುವ ಮೂಲಕ ನನಗೆ ಈ ವಾಕ್ಯದ ಮೇಲೆ ನಂಬಿಕೆ ಬರುವಂತೆ ಮಾಡಿದ್ದಾರೆ. ನನ್ನ ಹಾಗೂ ನನ್ನ ಕುಟುಂಬಕ್ಕೆ ಇಷ್ಟು ಪ್ರೀತಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಸಲ್ಮಾನ್ ಸರ್. ನಿಮ್ಮೊಂದಿಗೆ ಕೆಲಸ ಮಾಡಿರುವುದು ಹಾಗೂ ನಿಮ್ಮನ್ನು ಭೇಟಿ ಮಾಡಿರುವುದು ನನ್ನ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು ಅಂದರೆ ಡಿಸೆಂಬರ್ ನಲ್ಲಿ `ದಬಾಂಗ್-3′ ಚಿತ್ರದ ಪ್ರಮೋಶನ್‍ಗಾಗಿ ಸಲ್ಮಾನ್ ಖಾನ್ ಬೆಂಗಳೂರಿಗೆ ಬಂದಿದ್ದರು. ಸುದೀಪ್ ಅವರು ಕೂಡ ಚಿತ್ರತಂಡದ ಜೊತೆ ಸೇರಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಲ್ಮಾನ್, ಸುದೀಪ್ ನನ್ನ ಸಹೋದರ ಇದ್ದಂತೆ ಎಂದು ಹೇಳಿದ್ದರು.

ಸುದೀಪ್ ಜೊತೆ ನಟಿಸಿದ್ದು ನಿಮಗೆ ಹೇಗೆ ಎನಿಸಿತ್ತು ಎಂದು ಮಾಧ್ಯಮದವರು ಸಲ್ಮಾನ್ ಅವರು ಪ್ರಶ್ನಿಸಿದ್ದರು. ಆಗ ಸಲ್ಮಾನ್, ಸುದೀಪ್ ಜೊತೆ ಕೆಲಸ ಮಾಡಿದ್ದು ತುಂಬಾ ಚೆನ್ನಾಗಿತ್ತು. ಸುದೀಪ್ ನನ್ನ ಕಿರಿಯ ಸಹೋದರ ಸೋಹೆಲ್‍ನ ಸಹೋದರ ಇದ್ದಂತೆ. ಸೋಹೆಲ್‍ಗೆ ಸಹೋದರ ಎಂದರೆ ನನಗೂ ಸಹೋದರ ಇದ್ದಂತೆ. ನಮ್ಮ ಸಂಬಂಧ ಸಹೋದರರಂತೆ ಆಗಿದೆ. ಹಾಗಾಗಿ ಕೆಲಸ ಮಾಡುವುದರಲ್ಲಿ ನಮಗೆ ಖುಷಿಯಾಯಿತು ಎಂದು ಹೇಳಿದ್ದರು.


ಮೊದಲ ಬಾರಿಗೆ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ದಬಾಂಗ್ – 3 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಒಟ್ಟು 200 ಕೋಟಿ ರೂ. ಕಲೆಕ್ಷನ್ ಆಗಿದೆ. ಈ ಬಗ್ಗೆ ಸಲ್ಮಾನ್ ಖಾನ್ ಫಿಲಂ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *